ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: ಗುಜರಾತ್ ಚುನಾವಣಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಪದದ ಬಳಕೆ ಮಾಡದೇ ಇರಲು ಕಾರಣವೇನು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಗುಜರಾತ್ ಚುನಾವಣೆಯನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದ ರಾಹುಲ್ ಗಾಂಧಿ ಗುಜರಾತ್ ನಲ್ಲಿ 22 ವರ್ಷಗಳ ಕಾಲ ಬಿಜೆಪಿ ಆಡಳಿತ ನಡೆಸಿದೆ. ಆಡಳಿತ ನಡೆಸಿದ ಎಂದ ಮೇಲೆ ಅಭಿವೃದ್ಧಿಯಾಗಿರಲೇಬೇಕು. ಅಭಿವೃದ್ಧಿಯಾಗಿದ್ದರೆ ಅದನ್ನು ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಮೋದಿ ಏಕೆ ಬಳಕೆ ಮಾಡುತ್ತಿಲ್ಲ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ 10 ಪ್ರಶ್ನೆಗಳನ್ನು ಕೇಳಿದ್ದೆ. ಆದರೆ ಈ ವರೆಗೂ ಆ 10 ಪ್ರಶ್ನೆಗಳ ಪೈಕಿ ಒಂದಕ್ಕೂ ನನಗೆ ಉತ್ತರ ದೊರೆತಿಲ್ಲ. ಗುಜರಾತ್ ಚುನಾವಣೆಯ ಮೊದಲ ಹಂತದ ಮಾತದಾನವೇ ಮುಕ್ತಾಯದತ್ತ ಸಾಗಿದ್ದರೂ ಇನ್ನೂ ಪ್ರಣಾಳಿಕೆ ಬಿಡುಗಡೆಯಾಗಿಲ್ಲ. ದೇಶಾದ್ಯಂತ ಗುಜರಾತ್ ಮಾದರಿ ಅಭಿವೃದ್ಧಿ ಕುರಿತು ಮಾತನಾಡುವ ಪ್ರಧಾನಿ ಮೋದಿ, ಗುಜರಾತ್ ನೆಲದಲ್ಲೇ ಅ ಬಗ್ಗೆ ಮಾತನಾಡುತ್ತಿಲ್ಲ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.