ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಮತ್ತೆ ಭಾರತೀಯ ಸೇನೆಯ ಯೋಧರು ಪಾಕಿಸ್ತಾನ ಮೂಲದ ಐವರು ಉಗ್ರರ ಹೆಡೆಮುರಿ ಕಟ್ಟಿದ್ದು, ಓರ್ವ ಉಗ್ರನನ್ನು ಸಜೀವವಾಗಿ ಸೆರೆ ಹಿಡಿದಿದ್ದಾರೆ.
ಬಾರಾಮುಲ್ಲಾ ಮತ್ತು ಹಂದ್ವಾರದಲ್ಲಿ ನಡೆದ ಪ್ರತ್ಯೇಕ ಸೇನಾ ಕಾರ್ಯಚರಣೆಯಲ್ಲಿ ಐವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾಗಿತ್ತು, ಹಂದ್ವಾರಾದಲ್ಲಿ ಮೂವರು ಉಗ್ರರಿಗೆ ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ. ಹಂದ್ವಾರ ಜಿಲ್ಲೆಯಲ್ಲಿ ಜಮ್ಮು ಕಾಶ್ಮೀರ ಪೊಲೀಸ್ ಪಡೆ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ ನಡೆಸಿದ ಜಂಟಿ ಕಾರ್ಯಾಚರಣೆಗೆ ಮೂವರು ಪಾಕ್ ಉಗ್ರರು ಹತರಾಗಿದ್ದಾರೆ ಎಂದು ಜಮ್ಮು ಕಾಶ್ಮೀರದ ಡಿಜಿಪಿ ಎಸ್. ಪಿ ವೈದ್ ತಿಳಿಸಿದ್ದಾರೆ.
ಸೇನಾ ಮೂಲಗಳು ತಿಳಿಸಿರುವಂತೆ, ಸೇನಾ ಕಾರ್ಯಾಚರಣೆ ವೇಳೆ ಗಾಯೊಂಡಿದ್ದ ಓರ್ವ ಉಗ್ರನನ್ನು ಸೆರೆಹಿಡಿಯಲಾಗಿದ್ದು, ಉಗ್ರರ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಪ್ರಸ್ತುತ ಗಡಿಯಲ್ಲಿ ಗುಂಡಿನ ದಾಳಿ ನಿಂತಿದ್ದು, ಕೇಂದ್ರ ಮೀಸಲು ಪೊಲೀಸ್ ಪಡೆಯ 92ನೇ ಬೆಟಾಲಿಯನ್ ಮತ್ತು ಜಮ್ಮು ಕಾಶ್ಮೀರ ರಾಜ್ಯ ಪೊಲೀಸ್ ಪಡೆ ಮತ್ತಷ್ಟು ಉಗ್ರರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇನ್ನು ಕಾರ್ಯಾಚರಣೆ ವೇಳೆ ಸ್ಥಳೀಯ ಮಹಿಳೆಯೊಬ್ಬರು ಕೂಡ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತ ಉಗ್ರರೆಲ್ಲರೂ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರರಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.