ನವದೆಹಲಿ: ಗುಜರಾತ್ ಚುನಾವಣೆಗೂ ಮುನ್ನ ನಾಸ್ತಿಕನಂತೆ ಕಾಣುತ್ತಿದ್ದ ಕಾಂಗ್ರೆಸ್ ನ ನಿಯೋಜಿತ ಅಧ್ಯಕ್ಷ ರಾಹುಲ್ ಗಾಂಧಿ ದಿಢೀರ್ ಅಂತ ಹಿಂದೂಗಳ ಆಚರಣೆಯನ್ನು ಅನುಸರಿಸಲು ಮುಂದಾಗಿದ್ದಾರೆ. ಚುನಾವಣಾ ಪ್ರಚಾರಕ್ಕೂ ಮುನ್ನ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಪ್ರಚಾರಕ್ಕೆ ಅಣಿಯಾಗುತ್ತಿದ್ದರು. ಆ ಮೂಲಕ ಹಿಂದೂಗಳನ್ನು ಮತವನ್ನು ಸೆಳೆಯುವುದು ರಾಹುಲ್ ಗಾಂಧಿಯ ಯೋಜನೆಯಾಗಿದೆ.
ಈ ಮಧ್ಯೆ ಹಣೆಗೆ ಕುಂಕುಮ, ತಿಲಕ ಇಡಲು ಶುರು ಮಾಡಿದ್ದ ರಾಹುಲ್ ಗಾಂಧಿ ಕೊರಳಲ್ಲಿ ಇದೀಗ ರುದ್ರಾಕ್ಷಿ ಮಾಲೆ ಗೋಚರಿಸುತ್ತಿದೆ. ತಮ್ಮ ಅಜ್ಜಿ ಇಂದಿರಾ ಗಾಂಧಿಯಂತೆ ಇದೀಗ ರಾಹುಲ್ ಗಾಂಧಿ ಸಹ ರುದ್ರಾಕ್ಷಿ ಮಾಲೆಯನ್ನು ಹಾಕಿಕೊಳ್ಳಲು ಶುರು ಮಾಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗಿನ ಚುನಾವಣಾ ಪ್ರಚಾರದ ವೇಳೆ ಅವರು ಕೊರಳಲ್ಲಿ ಹಾಕಿಕೊಂಡಿರುವ ರುದ್ರಾಕ್ಷಿ ಮಾಲೆ ಫೋಟೋಗಳಲ್ಲಿ ಸೆರೆಯಾಗಿದೆ.
ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿ ಅವರು ಹಿಂದೂಗಳ ಆರಾಧ್ಯ ದೈವ ಶಿವನನ್ನು ನಂಬಿದ್ದರು. ಹೀಗಾಗಿ ಶಿವನ ಭಕ್ತರು ರಕ್ಷಣೆಗಾಗಿ ರುದ್ರಾಕ್ಷಿ ಮಾಲೆ ಧರಿಸುವುದು ಸಾಮಾನ್ಯ. ಅದೇ ರೀತಿ ಗುಜರಾತ್ ನ ಜಗತ್ ವಿಖ್ಯಾತ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ರಾಹುಲ್ ಗಾಂಧಿ ರುದ್ರಾಕ್ಷಿ ಮಾಲೆಯನ್ನು ಧರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಗುಜರಾತ್ ಚುನಾವಣೆ ಹಿನ್ನೆಲೆ ರಾಹುಲ್ ಗಾಂಧಿ ಹಿಂದೂಗಳ ಮತಗಳನ್ನು ಸೆಳೆಯಲು ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿತ್ತು.