ದೇಶ

ಗುಜರಾತ್ ಚುನಾವಣೆ: ಮತದಾನ ವೇಳೆ ಮೋದಿ ರೋಡ್ ಶೋ, ಕಾಂಗ್ರೆಸ್ ತೀವ್ರ ಪ್ರತಿಭಟನೆ

Srinivasamurthy VN
ಅಹ್ಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯ ನಿಮಿತ್ತ ಗುರುವಾರ ನಡೆದ ಅಂತಿಮ ಹಂತದ ಮತದಾನದ ವೇಳೆ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ ನಡೆ ನೀತಿ ಸಂಹಿತೆ ಉಲ್ಲಂಘನೆ ಎಂದು ಆರೋಪಿಸಿ  ಕಾಂಗ್ರೆಸ್ ಕಾರ್ಯಕರ್ತರು ವ್ಯಾಪಕ ಪ್ರತಿಭಟನೆ ನಡೆಸಿದ್ದಾರೆ.
ಅಹ್ಮದಾಬಾದ್ ನಲ್ಲಿರುವ ಕೇಂದ್ರ ಚುನಾವಣಾ ಆಯೋಗದ ಕಚೇರಿ ಬಳಿ ನೆರೆದಿರುವ ನೂರಾರು ಕಾರ್ಯಕರ್ತರು, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದು, ನೀತಿ ಸಂಹಿತೆ ಉಲ್ಲಂಘಿಸಿದ  ಮೋದಿ ವಿರುದ್ಧ ಕೂಡಲೇ ಎಫ್ ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ. ಗುಜರಾತ್ ಚುನಾವಣೆ ಸಂಬಂಧ ಪ್ರಚಾರ ಕಾರ್ಯ ಅಧಿಕೃತವಾಗಿ ಅಂತಿಮವಾಗಿದ್ದು, ಮತದಾನ ಆರಂಭವಾಗಿರುವ ಈ ಹೊತ್ತಿನಲ್ಲಿ ಪ್ರಧಾನಿ ಮೋದಿ  ಸಾಬರಮತಿ ಮತಗಟ್ಟೆಯ ಬಳಿ ರೋಡ್ ಶೋ ನಡೆಸಿರುವುದು ಸ್ಪಷ್ಟ ನೀತಿ ಸಂಹಿತೆ ಉಲ್ಲಂಘನೆ ಎಂದು ಕಾಂಗ್ರೆಸ್ ವಾದಿಸಿದೆ.
ಅಲ್ಲದೆ ಈ ಸಂಬಂಧ ರಾಜ್ಯ ಚುನಾವಣಾಧಿಕಾರಿಗಳಿಗೂ ಮನವಿ ಸಲ್ಲಿಕೆ ಮಾಡಿದೆ. ಕಾಂಗ್ರೆಸ್ ಅರ್ಜಿ ಸ್ವೀಕರಿಸಿದ ಚುನಾವಣಾ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ರಣ್ ದೀಪ್ ಸುರ್ಜೇವಾಲ ಅವರು, ಪ್ರಧಾನಿ ಮೋದಿ ಅವರಿಗೆ ಸೋಲಿನ ಭೀತಿ ಎದುರಾಗಿದೆ. ಇದೇ ಕಾರಣಕ್ಕೆ ಚುನಾವಣಾ ಆಯೋಗವನ್ನು ದುರ್ಬಳಕೆ  ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಗುಜರಾತ್ ನಲ್ಲಿ ಬಿಜೆಪಿ ಸರ್ಕಾರ ಮುಳುಗುತ್ತಿರುವ ದೋಣಿಯಾಗಿದ್ದು, ಇದನ್ನು ಮೇಲೆತ್ತಲು ಪ್ರಧಾನಿ ಮೋದಿ ಹರ ಸಾಹಸ ಪಡುತ್ತಿದ್ದಾರೆ ಎಂದೂ ಅವರು ಆರೋಪಿಸಿದರು.
SCROLL FOR NEXT