ದೇಶ

ಈಗ ನನ್ನದು ನಿವೃತ್ತಿಯ ಹಾದಿ: ಸೋನಿಯಾ ಗಾಂಧಿ

Sumana Upadhyaya
ನವದೆಹಲಿ: ರಾಜಕೀಯ ಜೀವನಕ್ಕೆ ರಾಜಿನಾಮೆ ನೀಡುವುದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಘೋಷಿಸಿದ್ದಾರೆ.
ಅವರ ಪುತ್ರ ರಾಹುಲ್ ಗಾಂಧಿ ನಾಳೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದ್ದಾರೆ. ದೆಹಲಿಯಲ್ಲಿ ಇಂದು ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊನೆಗೂ ಮೌನ ಮುರಿದಿದ್ದಾರೆ. ಸುಮಾರು 20 ವರ್ಷಗಳ ಕಾಲ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ನ್ನು ಮುನ್ನಡೆಸಿದ್ದ ಅವರು ಇದೀಗ ನಿವೃತ್ತಿಯ ಹೊಸ್ತಿಲಿನಲ್ಲಿದ್ದಾರೆ. ನಾನೀಗ ನಿವೃತ್ತಿ ಹೊಂದಲು ಬಯಸುತ್ತೇನೆ, ನನ್ನದು ನಿವೃತ್ತಿಯ ಹಾದಿ ಎಂದು ಹೇಳಿದರು.
ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ನಾಳೆ ಅಧಿಕೃತವಾಗಿ ರಾಹುಲ್ ಗಾಂಧಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ನಾಯಕರು ಮತ್ತು ಕಾರ್ಯಕರ್ತರು ಸೇರಿ ಸುಮಾರು 3,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಸ್ಪರ್ಧಿಸುತ್ತಾರೆಯೇ, ಇಲ್ಲವೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ. ಅವರೀಗ ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿದ್ದಾರೆ. ಈ ಹಿಂದೆ ಅವರ ಅತ್ತೆ ಇಂದಿರಾ ಗಾಂಧಿಯವರ ಕ್ಷೇತ್ರವಾಗಿತ್ತು.
ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಿಗೆ ನಡೆದ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಭವಿಷ್ಯ ಕೇಳಿಬಂದಿದೆ.
SCROLL FOR NEXT