ಜೈಪುರ: ರಾಜಸ್ತಾನದ ಜೈಪುರದಲ್ಲಿ ಕಳೆದ ಬುಧವಾರ 30 ವರ್ಷದ ವ್ಯಕ್ತಿಯೊಬ್ಬರು 22 ಲಕ್ಷ ರುಪಾಯಿ ಬೆಲೆಯ ಸೂಪರ್ ಬೈಕ್ ಚಾಲನೆ ಮಾಡುತ್ತಿದ್ದಾಗ ಅಪಘಾತಕ್ಕೀಡಾಗಿ ಸಾವನ್ನಪ್ಪಿರೊ ದಾರುಣ ಘಟನೆ ನಡೆದಿದೆ.
ಬೈಕ ಸವಾರ ರೋಹಿತ್ ಸಿಂಗ್ ಶೆಖಾವತ್ ಎಂದು ಗುರುತಿಸಲಾಗಿದ್ದು, ಕಳೆದ ಬುಧವಾರ ರಾತ್ರಿ ತನ್ನ ಸೂಪರ್ ಬೈಕ್, ಕವಾಸಾಕಿ ನಿಂಜಾ ಝೆಡ್ಎಕ್ಸ್ 10ಆರ್ ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ರೋಹಿತ್ ಧರಿಸಿದ್ದ ಹೆಲ್ಮೆಟ್ ತೆಗೆಯಲಾಗದ ಕಾರಣ ಮೆದುಳಿನ ರಕ್ತಸ್ರಾವ(ಬ್ರೇನ್ ಹ್ಯಾಮೊರೇಜ್ )ದಿಂದ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.
ಆಟೋಮೋಟಿವ್ ಸಂಸ್ಥೆಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರೋಹಿತ್ ಅವರ ಬೈಕ್ ಸುಮಾರು 22 ಲಕ್ಷ ರುಪಾಯಿ ಮೌಲ್ಯದ್ದಾಗಿದ್ದು, ಗಂಟೆಗೆ 300 ಕಿ.ಮೀ ನಷ್ಟು ವೇಗವನ್ನ ತಲುಪುವ ಸಾಮರ್ಥ್ಯ ಹೊಂದಿದೆ. ಕೆಲವು ವರದಿಗಳ ಪ್ರಕಾರ ರೋಹಿತ್ 50 ಸಾವಿರ ರು. ಮೌಲ್ಯದ ಇಂಪೋರ್ಟೆಡ್ ಹೆಲ್ಮೆಟ್ ಧರಿಸಿದ್ದರು. ಅತೀ ವೇಗದಲ್ಲಿ ಚಾಲನೆ ಮಾಡುವಾಗಲೂ ಅಲುಗಾಡದಂತೆ ಈ ಹೆಲ್ಮೆಟ್ ವಿನ್ಯಾಸ ಮಾಡಲಾಗಿರುತ್ತದೆ.
ರೋಹಿತ್ ಅವರು ಇಲ್ಲಿನ ಜೆಎಲ್ಎನ್ ಮಾರ್ಗ್ನಲ್ಲಿ ಹೋಗುವಾಗ ರಸ್ತೆ ದಾಟುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆಯೋದು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ರಸ್ತೆ ದಾಟುತ್ತಿದ್ದವರಿಗೆ ಗುದ್ದಿದ್ದು, ಬೈಕ್ ಸ್ಕಿಡ್ ಆಗಿ ಸುಮಾರು 50 ಅಡಿಗಳಷ್ಟು ದೂರ ರೋಹಿತ್ರನ್ನ ಎಳೆದುಕೊಂಡು ಹೋಗಿದೆ.
ಅಪಘಾತಕ್ಕೀಡಾಗಿ ರಸ್ತೆ ಮೇಲೆ ಬಿದ್ದಿದ್ದ ರೋಹಿತ್ಗೆ ತೀವ್ರ ರಕ್ತಸ್ರಾವವಾಗಿದ್ದು, ಸ್ಥಳದಲ್ಲಿದ್ದವರು ರೋಹಿತ್ ಧರಿಸಿದ್ದ ಹೆಲ್ಮೆಟ್ ತೆಗೆಯಲು ಯತ್ನಿಸಿದ್ದಾರೆ. ಆದರೆ ಹೆಲ್ಮೆಟ್ ತೆಗೆಯಲು ಸಾಧ್ಯವಾಗಿಲ್ಲ. ಹೀಗಾಗಿ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ವೈದ್ಯರು ಹೆಲ್ಮೆಟ್ ಕಟ್ ಮಾಡಿ ತೆಗೆಯಬೇಕಾಯ್ತು ಎಂದು ವರದಿ ವಿವರಿಸಿದೆ.
ಇನ್ನು ರೋಹಿತ್ ಅವರ ಬೈಕ್ ಗುದ್ದಿದ ವ್ಯಕ್ತಿಗೂ ಗಂಭೀರ ಗಾಯಗಳಾಗಿವೆ. ರೋಹಿತ್ ಅವರ ಬೈಕ್ ನಜ್ಜುಗುಜ್ಜಾಗಿದೆ. ಈ ಬಗ್ಗೆ ಜೈಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics