ದೇಶ

ಗುಜರಾತ್ ನಲ್ಲಿ ಮತಯಂತ್ರ ತಿರುಚುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ: ಚುನಾವಣಾ ಆಯೋಗ

Vishwanath S
ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಮತಯಂತ್ರ ತಿರುಚುವಿಕೆಯ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಎಕೆ ಜ್ಯೋತಿ ಅವರು ಹೇಳಿದ್ದಾರೆ. 
ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ಕಾರ್ಯ ಇಂದು ಆರಂಭಗೊಂಡಿದ್ದು ಈ ವೇಳೆ ಇವಿಎಂ ಯಂತ್ರಗಳನ್ನು ತಿದ್ದಲಾಗಿದೆ ಎಂದು ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಎಕೆ ಜ್ಯೋತಿ ಅವರು ಎರಡು ವಿಧಾನಸಭಾ ಚುನಾವಣೆಗಳ ಇವಿಯಂ ಯಂತ್ರವನ್ನು ತಿರುಚಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಮತಯಂತ್ರಗಳನ್ನು ಯಾರಿಂದಲೂ ತಿರುಚಲು ಸಾಧ್ಯವಿಲ್ಲ ಎಂಬ ಬಗ್ಗೆ ನಾನು ನಿಮಗೆ ವಿಶ್ವಾಸ ಕೊಡಿಸುತ್ತೇನೆ. ಮತಯಂತ್ರಗಳ ಬಗ್ಗೆ ಎತ್ತಲಾದ ಪ್ರಶ್ನೆಗಳು ಮತ್ತು ಸಂದೇಹಗಳ ಬಗ್ಗೆ ನಾವು ಈಗಾಗಲೇ ಮಾಧ್ಯಮದಲ್ಲಿ ಉತ್ತರ ಕೊಟ್ಟಿದ್ದೇನೆ ಎಂದು ಎಕೆ ಜ್ಯೋತಿ ಹೇಳಿದರು. 
ಈ ಚುನಾವಣೆಗಳಲ್ಲಿ ಎಲ್ಲೆಡೆಯೂ ವಿವಿಪ್ಯಾಟ್ ಯಂತ್ರಗಳಿದ್ದವು. ಹಾಗಾಗಿ ಪ್ರತಿಯೋರ್ವ ಮತದಾರನಿಗೂ ತಾನು ಯಾರಿಗೆ ಮತ ಹಾಕಿದ್ದೇನೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು. ಹಾಗಿರುವಾಗ ಎಲ್ಲಿಯೂ ಮತಯಂತ್ರ ತಿರುಚಲಾಗಿರುವ ಪ್ರಮೇಯವೇ ಇಲ್ಲ ಎಂದು ಹೇಳಿದರು. 
SCROLL FOR NEXT