ನವದೆಹಲಿ: ಪ್ರಧಾನಿ ಮೋದಿ ಮ್ಯಾಜಿಕ್ ನಿಂದಾಗಿ ಬಿಜೆಪಿ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆಯಲ್ಲಿ ಜಯ ಗಳಿಸಿದೆ ಎಂದು ಬಾಲಿವುಡ್ ನಟ ಹಾಗೂ ಬಿಜೆಪಿ ಮುಖಂಡ ಶತೃಘ್ನ ಸಿನ್ಹಾ ಅವರು ಹೇಳಿದ್ದಾರೆ.
ಸೋಮವಾರ ಪ್ರಕಟವಾದ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ಚುನಾವಣಾ ಫಲಿತಾಂಶದ ಹಿನ್ನಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಶತೃಘ್ನ ಸಿನ್ಹಾ ಅವರು, ಬಿಜೆಪಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ. ಅಂತೆಯೇ ಪ್ರಧಾನಿ ಮೋದಿ ಹವಾ ಈ ಚುನಾವಣೆಯಲ್ಲೂ ಮುಂದುವರೆದಿದ್ದು, ಬಿಜೆಪಿಯ ಪ್ರಮುಖ ಮಹಾನ್ ಕಾರ್ಯತಂತ್ರ ರೂಪಕ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಅಂತೆಯೇ ಹಿಮಾಚಲ ಪ್ರದೇಶದಲ್ಲಿ ಪಕ್ಷದ ಗೆಲುವಿಗೆ ಕಾರಣರಾದ ಜೆಪಿ ನಡ್ಡಾ, ಅನುರಾಗ್ ಠಾಕೂರ್ ಅವರನ್ನು ಸಿನ್ಹಾ ಶ್ಲಾಘಿಸಿದ್ದು, ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸಿದ ನಾಯಕರಿಗೆ ಸೂಕ್ತ ಸ್ಥಾನಮಾನ ದೊರೆಯಲಿ ಎಂದು ಸಿನ್ಹಾ ಆಶಿಸಿದ್ದಾರೆ.
ರಾಹುಲ್ ಅಂಡ್ ಟೀಂ ಅನ್ನು ಹೊಗಳಿದ ಬಿಜೆಪಿ ಮುಖಂಡ
ಇದೇ ವೇಳೆ ಗುಜರಾತ್ ಚುನಾವಣೆ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ರಾಹುಲಾ ಗಾಂಧಿ ಮತ್ತು ಅವರ ತಂಡವನ್ನೂ ಮುಕ್ತಕಂಠದಿಂದ ಶ್ಲಾಘಿಸಿರುವ ಬಿಜೆಪಿ ಮುಖಂಡ ಶತೃಘ್ನ ಸಿನ್ಹಾ ಅವರು, ನಿಜಕ್ಕೂ ರಾಹುಲ್ ಗಾಂಧಿ ಹಾಲಿ ಚುನಾವಣೆಯಲ್ಲಿ ಕ್ರೀಡಾಸ್ಪೂರ್ತಿ ತೋರಿದ್ದಾರೆ. ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಪ್ರಬಲ ಹೋರಾಟ ನೀಡುವ ಮೂಲಕ ತಾವೊಬ್ಬ ಭವಿಷ್ಯದ ಪ್ರಬಲ ನಾಯಕ ಎಂಬುದನ್ನು ರಾಹುಲ್ ತೋರಿಸಿಕೊಟ್ಟಿದ್ದಾರೆ. ಈ ಹಿಂದೆ ಪ್ರಕಟವಾಗಿದ್ದ ಚುನಾವಣೋತ್ತರ ವರದಿಗಳನ್ನೇ ತಲೆಕೆಳಗಾಗಿಸಿ ಕಾಂಗ್ರೆಸ್ ಪಕ್ಷ ಗುಜರಾತ್ ನಲ್ಲಿ ಉತ್ತಮ ಸಾಧನೆ ತೋರಿದೆ. ಅಂತೆಯೇ ಗುಜರಾತ್ ನಲ್ಲಿ ಹೊಸ ಯುವ ಶಕ್ತಿಯಾಗಿ ಉದಯವಾಗಿರುವ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಮತ್ತು ಅಲ್ಪೇಶ್ ಠಾಕೂರ್ ಅವರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣೆಯಲ್ಲಿ ಅವರ ಪ್ರದರ್ಶನ ನಿಜಕ್ಕೂ ಅತ್ಯುತ್ತಮವಾಗಿತ್ತು ಎಂದು ಶತೃಘ್ನ ಸಿನ್ಹಾ ಟ್ವೀಟ್ ಮಾಡಿ ಹರಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics