ನವದೆಹಲಿ: ಆಸ್ತಿ ವ್ಯವಹಾರಕ್ಕೆ ಆಧಾರ್ ಕಡ್ಡಾಯ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿಗೆ ತಿಳಿಸಿದೆ.
ಈ ಕುರಿತ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಗೃಹ ಮತ್ತು ನಗಾರಭಿವೃದ್ಧಿ ಖಾತೆ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, 1908ರ ನೋಂದಣಿ ಕಾಯಿದೆಯ ನಿಬಂಧನೆಗಳಡಿ ಆಸ್ತಿ ನೋಂದಾಯಿಸಲು ಸಮ್ಮತಿಯೊಂದಿಗೆ ಆಧರ್ ಬಳಸಿಕೊಳ್ಳುವ ಬಗ್ಗೆ ಪರಿಶೀಲಿಸುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಗಿದೆ ಎಂದರು.
ಹರ್ದೀಪ್ ಸಿಂಗ್ ಅವರು ಒಂದು ತಿಂಗಳ ಹಿಂದೆ ಆಸ್ತಿ ವ್ಯವಹಾರಕ್ಕೆ ಆಧಾರ್ ಲಿಂಕ್ ಮಾಡುವುದು ಉತ್ತಮ ವಿಚಾರ ಎಂದು ಹೇಳಿದ್ದರು. ಅಲ್ಲದೆ ಈ ಸಂಬಂಧ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದರು. ಈ ಹಿನ್ನಲೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದ್ಯ ಆಸ್ತಿ ವ್ಯವಹಾರಕ್ಕೆ ಆಧಾರ್ ಕಡ್ಡಾಯ ಪ್ರಸಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮುಂಚೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ 'ಆಧಾರ್ ಸಂಖ್ಯೆಯ ಮೂಲಕ ಬೇನಾಮಿ ಆಸ್ತಿ ಪತ್ತೆ ಮಾಡಲಾಗುವುದು ಎಂದು ಹೇಳಿದ್ದರು. ಹೀಗಾಗಿ ಆಸ್ತಿ ವ್ಯವಹಾರಕ್ಕೆ ಆಧಾರ್ ಕಡ್ಡಾಯಗೊಳಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿದ್ದವು.