ದೇಶ

ಒಡಿಶಾ: ಬಾಲಕಿಯ ದವಡೆ ಭಾಗದಲ್ಲಿದ್ದ 7 ಕೆಜಿ ಟ್ಯೂಮರ್ ನ್ನು ಹೊರತೆಗೆದ ವೈದ್ಯರು

Srinivas Rao BV
ಕಟಕ್: ಒಡಿಶಾದ ಪ್ಲಾಸ್ಟಿಕ್ ಸರ್ಜರಿ ತಜ್ಞರು ಅಪರೂಪದ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು, 15 ವರ್ಷದ ಬಾಲಕಿಯ ದವಡೆ ಭಾಗದಲ್ಲಿ ಬೆಳೆದಿದ್ದ 7 ಕೆಜಿಯಷ್ಟು ಟ್ಯೂಮರ್ ನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ. 
ಸುಮಾರು 10 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಟ್ಯೂಮರ್ ನ್ನು ಹೊರತೆಗೆಯುವುದರಲ್ಲಿ ಎಸ್ ಸಿಬಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ಅನಿತಾ ರೈಕಾ ಶಸ್ತ್ರಚಿಕಿತ್ಸೆಗೊಳಗಾದ 15 ವರ್ಷದ ಬಾಲಕಿಯಾಗಿದ್ದು, ಮಕ್ಕಳಲ್ಲಿ ಅಪರೂಪವಾಗಿ ಕಂಡುಬರುವ ಮ್ಯಾಂಡಿಬಲ್ ಟ್ಯೂಮರ್ ಗೆ ತುತ್ತಾಗಿದ್ದರು. 
13 ನೇ ವಯಸಿನಲ್ಲೇ ಅನಿತಾ ರೈಕಾಗೆ ದವಡೆಯಲ್ಲು ಊತ ಕಾಣುವ ಮೂಲಕ ಮ್ಯಾಂಡಿಬಲ್ ಟ್ಯೂಮರ್ ನ ಲಕ್ಷಣಗಳು ಗೋಚರಿಸಿತ್ತು. ನಂತರದ ದಿನಗಳಾಲ್ಲಿ ಅದು ಬೃಹದಾಕಾರವಾಗಿ ಬೆಳೆದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ವೈದ್ಯರನ್ನು ಸಂಪರ್ಕಿಸಿದ್ದರು. ಆದರೆ ಬಹುತೇಕ ವೈದ್ಯರು ಕೈ ಚೆಲ್ಲಿದರು. ಕೊನೆಗೆ  ರಾಷ್ಟ್ರೀಯ ಬಾಲ ಸ್ವಸ್ಥ್ಯ ಕಾರ್ಯಕ್ರಮ ಯೋಜನೆಯ ಸಹಯೋಗದ ಅಡಿಯಲ್ಲಿ ಎಸ್ ಸಿಬಿ ಮೆಡಿಕಲ್ ಕಾಲೇಜಿನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರು ಅರ್ಜುನ್ ಚೌಧರಿ ಶಸ್ತ್ರಚಿಕಿತ್ಸೆ ನಡೆಸಲು ಒಪ್ಪಿಗೆ ಸೂಚಿಸಿದರು. 
ಅ.07 ರಂದೇ ಅನಿತಾ ಅವರನ್ನು ಆಸ್ಪತ್ರೆಗೆ ದಲಖಲಿಸಲಾಯಿತಾದರೂ ಆಕೆಗೆ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇದ್ದ ಕಾರಣ ಶಸ್ತ್ರಚಿಕಿತ್ಸೆ ವಿಳಂಬವಾಯಿತು. 6 ಯುನಿಟ್ ಗಳಷ್ಟು ರಕ್ತವನ್ನು ನೀಡಿದ ನಂತರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದ್ದು, ವೈದ್ಯರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ಬಾಲಕಿ ಶಸ್ತ್ರಚಿಕಿತ್ಸೆಗೊಳಗಾಗಿರುವ ಹಿನ್ನೆಲೆಯಲ್ಲಿ ಆಕೆಯನ್ನು ಮಾತ್ರ ಕಿರುನಗೆ ಬೀರುವುದರಿಂದ ತಾತ್ಕಾಲಿಕವಾಗಿ ತಡೆಯಲಾಗಿದೆ.
SCROLL FOR NEXT