ನವದೆಹಲಿ: ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲದೇ ಇರಬಹುದು. ಆದರೆ ಬಿಜೆಪಿ ಪಕ್ಷಕ್ಕೆ ಮರೆಯಲಾಗದ ಪ್ರಬಲ ಹೊಡೆತ ನೀಡಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಗುಜರಾತ್ ಚುನಾವಣಾ ಫಲಿತಾಂಶದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನೂತನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಚುನಾವಣಾ ಫಲಿತಾಂಶದ ಮೂಲಕ ಗುಜರಾತ್ ಜನತೆ ಮೋದಿ ಮತ್ತು ಅವರ ತಂಡಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಗುಜರಾತ್ ಮಾದರಿ ಕುರಿತ ಅವರ ಕೋಪವನ್ನು ಚುನಾವಣೆಯಲ್ಲಿ ಜನತೆ ಹೊರ ಹಾಕಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ನಾವು ಗುಜರಾತ್ ಆಗಮಿಸಿದ್ದಾಗ, ಅವರು ನಿಮ್ಮಿಂದ ಬಿಜೆಪಿ ಸೋಲಿಸಲು ಸಾಧ್ಯವಿಲ್ಲ ಎಂಬ ಧಾಟಿಯಲ್ಲಿ ನೋಡಿದ್ದರು. ಆದರೆ ನಮ್ಮ ಪಕ್ಷದ ಕಾರ್ಯಕರ್ತರು ಹಗಲು ರಾತ್ರಿ ಶ್ರಮಿಸಿದರು. ನಮ್ಮ ಶ್ರಮ ಇಂದು ಗುಜುರಾತ್ ಚುನಾವಣಾ ಫಲಿಂತಾಶದಲ್ಲಿ ಗೋಚರಿಸಿದೆ.
ಬಿಜೆಪಿಯನ್ನು ಅಲುಗಾಡಿಸಲು ಸಾಧ್ಯವೇ ಇಲ್ಲ ಎಂದು ಬೀಗುತ್ತಿದ್ದ ಪ್ರಧಾನಿ ಮೋದಿ ತಮ್ಮ ತವರಿನಲ್ಲೇ ಗೆಲುವಿಗಾಗಿ ಹರಸಾಹಸಪಡುವ ಸ್ಥಿತಿ ನಿರ್ಮಾಣವಾಗಿತ್ತು. ಗುಜರಾತ್ ಚುನಾವಣಾ ಫಲಿತಾಂಶ ಬಿಜೆಪಿಗೆ ಪ್ರಬಲ ಹೊಡೆತವಾಗಿದ್ದು, ಇದು ಬಿಜೆಪಿ ಪತನದ ಆರಂಭ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಂತೆಯೇ ಗುಜರಾತ್ ನಲ್ಲಿ ನಾವು ಸೋತಿರಬಹುದು. ಆದರೆ ಫಲಿತಾಂಶದಿಂದ ನಮಗೆ ನಿರಾಶೆಯಾಗಿಲ್ಲ. ರಾಜ್ಯದಲ್ಲಿನ ಕಾರ್ಯಕರ್ತ ಶ್ರಮ ಖುಷಿ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶ್ರಮವಹಿಸಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.