ದೇಶ

ಶಾಲಾ ಬಾಲಕ ಪ್ರದ್ಯುಮ್ನ ಕೊಲೆ ಪ್ರಕರಣ: ಆರೋಪಿ ವಯಸ್ಕನೆಂದು ಬಾಲಾಪರಾಧ ಕೋರ್ಟ್‌ ಪರಿಗಣನೆ

Srinivasamurthy VN
ಗುರುಗಾಂವ್: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಗುರುಗ್ರಾಮದ ರಿಯಾನ್‌ ಅಂತಾರಾಷ್ಟ್ರೀಯ ಶಾಲೆಯಲ್ಲಿ ಬಾಲಕ ಪ್ರದ್ಯುಮ್ನನ ಕೊಲೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಬಾಲಾಪರಾಧ ನ್ಯಾಯಾಲಯ ಆರೋಪಿ  ವಿದ್ಯಾರ್ಥಿಯನ್ನು ವಯಸ್ಕ ಎಂದು ತೀರ್ಪು ನೀಡಿದೆ.
ಗುರುಗ್ರಾಮದ ರಿಯಾನ್‌ ಅಂತಾರಾಷ್ಟ್ರೀಯ ಶಾಲೆಯಲ್ಲಿ ನಡೆದ 7 ವರ್ಷದ ಬಾಲಕ ಪ್ರದ್ಯುಮ್ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಬಾಲಕನನ್ನು ವಯಸ್ಕ ಎಂದು ಕೋರ್ಟ್‌ ಪರಿಗಣಿಸಿದೆ. ಸೆಪ್ಟಂಬರ್‌ 8ರಂದು  ಬೆಳಗ್ಗೆ ಶಾಲೆಯ ಶೌಚಗೃಹದಲ್ಲಿ ಕುತ್ತಿಗೆ ಸೀಳಿ 2ನೇ ತರಗತಿ ವಿದ್ಯಾರ್ಥಿ ಬಾಲಕ ಪ್ರದ್ಯುಮ್ನನನ್ನು ಹತ್ಯೆ ಮಾಡಲಾಗಿತ್ತು. 3-4 ನಿಮಿಷದಲ್ಲಿ ಕೃತ್ಯ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಪ್ರಕರಣದ ವಿಚಾರಣೆ  ಇದೇ ಡಿಸೆಂಬರ್ 22ರಿಂದ ಆರಂಭವಾಗಲಿದೆ.
ಕಳೆದ ಸೆಪ್ಟೆಂಬರ್ 8ರಂದು ಎಂದಿನಂತೆ ಶಾಲೆಗೆ ತೆರಳಿದ್ದ ಪ್ರದ್ಯುಮ್ನ ಠಾಕೂರ್‌ ಮೃತದೇಹ ಶಾಲೆಯ ಶೌಚಾಲಯದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನು ಇತರ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿಯ  ಗಮನಕ್ಕೆ ತಂದಿದ್ದರು. ಪ್ರಕರಣವನ್ನು ಖಂಡಿಸಿ ವಿದ್ಯಾರ್ಥಿಯ ಪೋಷಕರು ಸೇರಿದಂತೆ ಸಾರ್ವಜನಿಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ವಿದ್ಯಾರ್ಥಿ ಕೊಲೆ ಪ್ರಕರಣದ ತನಿಖೆಯನ್ನು ಹರಿಯಾಣ ಸರ್ಕಾರ ವಿಶೇಷ  ತನಿಖಾ ತಂಡಕ್ಕೆ(ಎಸ್‌ಐಟಿ) ವಹಿಸಿತ್ತು. ಆದರೆ, ಬಾಲಕನ ತಂದೆ ವರುಣ್ ಠಾಕೂರ್‌ ಮತ್ತು ಕುಟುಂಬ ಸದಸ್ಯರು ಸಿಬಿಐ ತನಿಖೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಶಾಲೆಯ ಮಾಲಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶಾಲಾ ಬಸ್‌ ನಿರ್ವಾಹಕ ಅಶೋಕ್‌ ರನ್ನೂ ಸಹ ಪೊಲೀಸರ ವಶಕ್ಕೆ  ಪಡೆದಿದ್ದರು. ಶಾಲೆಯ ಹಂಗಾಮಿ ಮುಖ್ಯೋಪಾಧ್ಯರಾದ ನೀರಜಾ ಬಾತ್ರಾ, ಹಿಂದಿನ ಮುಖ್ಯೋಪಾಧ್ಯಾಯ ರಾಖಿ ವರ್ಮಾ, ಬಸ್‌ ಚಾಲಕ ಸೌರಭ್‌ ರಾಘವ್‌, ನಿವಾರ್ಹಕ ಹರ್ಕೇಶ್‌ ಪ್ರಧಾನ್‌ ಹಾಗೂ ಇತರ ಎಂಟು  ಕಾವಲುಗಾರರನ್ನು ಎಸ್‌ಐಟಿ ವಿಚಾರಣೆ ನಡೆಸಿತ್ತು.
ಇದಾದ ಬಳಿಕ ಶಾಲೆಯ 11ನೇ ತರಗತಿ ವಿದ್ಯಾರ್ಥಿಯೋರ್ವನನ್ನು ಶಂಕೆಯ ಮೇರೆಗೆ ಅಧಿಕಾರಿಗಳು ಬಂಧಿಸಿದ್ದರು. ಈ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ ಆರೋಪಿ ಪರೀಕ್ಷೆಗಳನ್ನು ಮುಂದೂಡುವುದಕ್ಕಾಗಿ ಬಾಲಕ ಕತ್ತು ಸೀಳಿದ್ದೆ  ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿತ್ತು. ಈ ಹಿಂದೆ ಆರೋಪಿಯ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು.
SCROLL FOR NEXT