ದೇಶ

ಗುಜರಾತ್: ಡಿಸೆಂಬರ್ 25ರಂದು ಸಿಎಂ ಆಗಿ ವಿಜಯ್ ರೂಪಾನಿ ಪ್ರಮಾಣ ವಚನ ಸ್ವೀಕಾರ

Srinivasamurthy VN
ಅಹ್ಮದಾಬಾದ್: ಇದೇ ಡಿಸೆಂಬರ್ 25ರಂದು ಗುಜರಾತ್ ನಲ್ಲಿ ಮತ್ತೆ ಬಿಜೆಪಿ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಹಾಲಿ ಸಿಎಂ ವಿಜಯ್ ರೂಪಾನಿ ಅವರೇ ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ  ಎಂದು ತಿಳಿದುಬಂದಿದೆ.
ಈ ಹಿಂದೆ ಸಿಎಂ ವಿಜಯ್ ರೂಪಾನಿ ಅವರ ಚುನಾವಣಾ ಪ್ರಯಾಸದ ಜಯಕ್ಕೆ ಸಂಬಂಧಿದಂತೆ ರೂಪಾನಿ ಅವರನ್ನು ಮುಂದಿನ ಸಿಎಂ ಆಗಿ ಮುಂದುವರೆಸಬಾರದು ಎಂದು ಕೆಲ ಬಿಜೆಪಿ ನಾಯಕರ ಬಣ ವಾದಿಸಿತ್ತು. ಆದರೆ  ಮತ್ತೊಂದು ಬಣ ರೂಪಾನಿ ಅವರ ನೇತೃತ್ವದಲ್ಲೇ ಬಿಜೆಪಿ ಪಕ್ಷ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಅವರ ನೇತೃತ್ವದಲ್ಲೇ ಸರ್ಕಾರ ರಚನೆ ಮಾಡಬೇಕು ಎಂದು ವಾದಿಸಿದ್ದರು. ಇದೀಗ ಈ ವಾದಕ್ಕೆ ಬಿಜೆಪಿ ವರಿಷ್ಟರು ಮನ್ನಣೆ  ನೀಡಿದ್ದು, ಈ ಹಿಂದೆ ಚುನಾವಣಾ ಪ್ರಚಾರದಲ್ಲಿ ಘೋಷಣೆ ಮಾಡಿದಂತೆ ವಿಜಯ್ ರೂಪಾನಿ ಅವರನ್ನೇ ಮುಂದಿನ ಸರದಿಗೂ ಸಿಎಂ ಆಗಿ ಮುಂದುವರೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಸಿಎಂ ವಿಜಯ್ ರೂಪಾನಿ ಮತ್ತು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ನೇತೃತ್ವ-ಲ್ಲಿ ಬಿಜೆಪಿ ಭ್ರಷ್ಟಾಚಾರ ರಹಿತ ಅಭಿವೃದ್ಧಿ  ಪೂರಕ ಸರ್ಕಾರವನ್ನು ನೀಡಿದ್ದು, ಇವರ ನೇತೃತ್ವದಲ್ಲೇ ಮುಂದಿನ ಸರ್ಕಾರ ಮುಂದುವರೆಯಲಿದೆ ಎಂದು ಹೇಳಿದ್ದರು. ಅದರಂತೆ ಇದೀಗ ವಿಜಯ್ ರೂಪಾನಿ ನೇತೃತ್ವದಲ್ಲೇ ಮತ್ತೆ ಗುಜರಾತ್ ನಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ  ಬರಲಿದೆ.
SCROLL FOR NEXT