ನವದೆಹಲಿ: 2 ಜಿ ಹಗರಣ ಪ್ರಕರಣದ ಬಗ್ಗೆ ತೀರ್ಪು ಪ್ರಕಟಿಸಿರುವ ಸಿಬಿಐ ನ್ಯಾಯಾಲಯ, ಮಾಜಿ ಕೇಂದ್ರ ಸಚಿವ ಎ.ರಾಜಾ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ 2 ಜಿ ಸ್ಪೆಕ್ಟ್ರಂ ಹಂಚಿಕೆ ಬಗ್ಗೆ ತಪ್ಪು ಮಾಹಿತಿ ನೀಡಿರಲಿಲ್ಲ ಎಂದು ಕೋರ್ಟ್ ಹೇಳಿದೆ.
ಸ್ಪೆಕ್ಟ್ರಂ ಹಂಚಿಕೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಪ್ರಧಾನಿ ಕಾರ್ಯಾಲಯದ ಸಿಬ್ಬಂದಿ ಸಂಪೂರ್ಣ ಮಾಹಿತಿ ನೀಡಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಇದಕ್ಕಾಗಿ ಎ. ರಾಜಾ ಅವರನ್ನು ದೂಷಿಸಲು ಸಾಧ್ಯವಿಲ್ಲ ಎಂದು ವಿಶೇಷ ನ್ಯಾಯಾಧೀಶ ಒ.ಪಿ ಸೈನಿ ಅಭಿಪ್ರಾಯಪಟ್ಟಿದ್ದಾರೆ.
ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ವಾಸ್ತವ ಮಾಹಿತಿಯನ್ನು ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರಿಗೆ ತಪ್ಪಾಗಿ ಅರ್ಥೈಸಲಾಗಿದೆ ಎಂಬ ಪ್ರತಿವಾದಿಗಳ ವಾದವನ್ನು ಕೋರ್ಟ್ ತಳ್ಳಿಹಾಕಿದ್ದು, ಟೆಲಿಕಾಂ ಇಲಾಖೆ(ಡಿಒಟಿ) ನ ನಿರ್ಧಾರದ ಬಗ್ಗೆ ತಿಳಿಸಿರುವ ಪತ್ರ ಹಾಗೂ ಅದರಲ್ಲಿ ಹೇಳಲಾಗಿದ್ದ ತರಂಗಾಂತರ ಹಂಚಿಕೆಯಲ್ಲಿ ಹೊಸ ಪರವಾನಗಿಯ ನೀಡುವುದು ತುರ್ತು ಅಗತ್ಯ, ಈ ಬಗ್ಗೆ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂಬ ಅಂಶಗಳಿತ್ತು. ಆದರೆ ಈ ಬಗ್ಗೆ ಪ್ರಧಾನಿ ಕಾರ್ಯಾಲಯದ ಸಿಬ್ಬಂದಿಗಳು ಸರಿಯಾಗಿ ಪರಿಶೀಲನೆ ನಡೆಸಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಕೋರ್ಟ್ ಹೇಳಿದೆ.