ದೇಶ

20ನೇ ವಾರ್ಷಿಕ ಗಡಿ ಸಮಾಲೋಚನೆ: ಚೀನಾ-ಇಂಡೋ ಭದ್ರತಾ ಸಲಹೆಗಾರರ ಚರ್ಚೆ

Srinivasamurthy VN
ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ 20ನೇ ಇಂಡೋ-ಚೀನಾ ಗಡಿ ಸಮಾಲೋಚನಾ ಸಭೆಯಲ್ಲಿ ಚೀನಾದ ಕೌನ್ಸಿಲರ್ ಯಾಂಗ್ ಜೀಚಿ ಮತ್ತು ಭಾರತದ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಪಾಲ್ಗೊಂಡು ಚರ್ಚೆ ನಡೆಸಿದ್ದಾರೆ.
ಇಂಡೋ-ಚೀನಾ ಶೀತಲ ಸಮರಕ್ಕೆ ಕಾರಣವಾಗಿದ್ದ ಡೊಕ್ಲಾಂ ಗಡಿ ಅತಿಕ್ರಮಣ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ನಾಯಕರು ಚರ್ಚೆ ನಡೆಸಿದ್ದು, ಡೊಕ್ಲಾಂ ವಿವಾದದ ಬಳಿಕ ನಡೆಯುತ್ತಿರುವ ಮೊದಲ ಗಡಿ ಸಮಾಲೋಚನಾ  ಸಭೆಯಾಗಿದೆ. ಸಭೆಯಲ್ಲಿ ಪ್ರಮುಖವಾಗಿ 73 ದಿನಗಳ ಕಾಲ ಇಂಡೋ-ಚೀನಾ ಗಡಿ ಪ್ರಕ್ಷುಬ್ಧತೆಗೆ ಕಾರಣವಾಗಿದ್ದ ಡೊಕ್ಲಾಂ ವಿವಾದ ಸಂಬಂಧ ಚರ್ಚೆ ನಡೆಯಲಿದ್ದು, ಇದರೊಂದಿಗೆ ಸುಮಾರು 4000 ಕಿ.ಮೀ ಉದ್ದದ ಇಂಡೋ-ಚೀನಾ  ಗಡಿ ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದಾರೆ.
ಗಡಿ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಈ ಸಭೆಯ ಪ್ರಮುಖ ಉದ್ದೇಶವಾಗಿದ್ದು, 2003ರಿಂದಲೂ ಪ್ರತೀ ವರ್ಷ ಉಭಯ ದೇಶಗಳಲ್ಲಿ ಈ ಸಭೆ ಆಯೋಜನೆಗೊಳ್ಳುತ್ತಾ ಬಂದಿದೆ. ಇದರ ಬೆನ್ನಲ್ಲೇ ರಷ್ಯಾ  ಇಂಡಿಯಾ ಚೀನಾ ಸದಸ್ಯರನ್ನೊಳಗೊಂಡ ಸಮ್ಮೇಳನ ನಡೆಯಲಿದೆ. 
ಈ ಹಿಂದೆ ಚೀನಾದಲ್ಲಿ ನಡೆದ ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಭಾರತ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು, ಡೊಕ್ಲಾಂ ವಿವಾದ ಸಂಬಂಧ ಚೀನಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ  ಉಭಯ ದೇಶಗಳು ವಿವಾದಿತ ಗಡಿಯಲ್ಲಿರುವ ತಮ್ಮ ಸೇನೆಯನ್ನು ವಾಪಸ್ ಕರೆಸಿಕೊಂಡಿದ್ದವು. ಇದೀಗ ಮತ್ತೆ ವಿವಾದಿತ ಡೊಕ್ಲಾಂ ಗಡಿಯಲ್ಲಿ ಚೀನಾ ಸೈನಿಕರು ಮೊಕ್ಕಾಂ ಹೂಡಿದ್ದು, ಕ್ಯಾಂಪ್ ಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂಬ  ಆರೋಪಗಳು ಕೇಳಿ ಬಂದಿವೆ. ಈ ಹಿನ್ನಲೆಯಲ್ಲಿ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ.
SCROLL FOR NEXT