ನವದೆಹಲಿ: ಶೌಚಾಲಯದಲ್ಲಿ ಮಕ್ಕಳ ಫೋಟೋಗಳನ್ನು ತೆಗೆದು ಪ್ರತಿನಿತ್ಯ ವಾಟ್ಸಾಪ್ ಗುಂಪಿನಲ್ಲಿ ಹಾಕುವಂತೆ ಛತ್ತೀಸ್ ಗಢ ರಾಜ್ಯದ ದಮ್ತರಿ ಜಿಲ್ಲೆಯ ಗ್ರಾಮ ಪಂಚಾಯತ್ ವಿಲಕ್ಷಣ ಆದೇಶ ಹೊರಡಿಸಿದೆ.
ಸ್ವಚ್ಛ ಭಾರತ ಯೋಜನೆಯಡಿ ಕಡಿಮೆ ವೆಚ್ಚದಲ್ಲಿ 355 ಶಾಲೆಗಳಿಗೆ ಶೌಚಾಲಯಗಳನ್ನು ಒದಗಿಸಿದ್ದು ಅಲ್ಲಿನ ಶಾಲಾ ಆಡಳಿತ ವರ್ಗದವರಿಗೆ ಮತ್ತು ಶಿಕ್ಷಕರಿಗೆ ಶೌಚಾಲಯದಲ್ಲಿ ಮಕ್ಕಳಿರುವಾಗಿನ ಫೋಟೋಗಳನ್ನು ತೆಗೆದು ವಾಟ್ಸಾಪ್ ಗುಂಪಿಗೆ ಹಾಕುವಂತೆ ಪಂಚಾಯತ್ ಆದೇಶ ಹೊರಡಿಸಿದೆ. ಮಕ್ಕಳು ಶೌಚಾಲಯ ಮಾಡುವಾಗ, ನಂತರ ಕೈಯನ್ನು ತೊಳೆದುಕೊಳ್ಳುವಾಗ ಹಾಗೂ ಇತರ ಸ್ವಚ್ಛತಾ ಚಟುವಟಿಕೆಗಳಲ್ಲಿರುವಾಗಿನ ಫೋಟೋಗಳನ್ನು ಹಾಕುವಂತೆ ಸೂಚಿಸಲಾಗಿದೆ. ಶೌಚಾಲಯಗಳನ್ನು ಸ್ವಚ್ಛವಾಗಿ ಬಳಸುವುದು ಹೀಗೆ ಫೋಟೋ ತೆಗೆದು ವಾಟ್ಸಾಪ್ ಗುಂಪಿಗೆ ಹಾಕುವುದರ ಉದ್ದೇಶವಾಗಿದ್ದರೂ ಕೂಡ ಮಕ್ಕಳು ಬಹಿರ್ದೆಸೆ ಮಾಡುವಾಗ ಫೋಟೋ ತೆಗೆಯುವುದು ಬೋಧಕರಿಗೆ ಮತ್ತು ಶಾಲಾಧಿಕಾರಿಗಳು ಸರಿಯಾಗಿ ಕಾಣಿಸಲಿಲ್ಲ.
ಶಾಲಾ ಅಧಿಕಾರಿಗಳು ಆದೇಶವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೊಂದು ಸಂಪೂರ್ಣ ಹಾಸ್ಯಾಸ್ಪದ ಕ್ರಮವಾಗಿರುವುದಲ್ಲದೆ ಮಕ್ಕಳ ಖಾಸಗಿತನವನ್ನು ಕಸಿದುಕೊಂಡಂತೆ. ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮತ್ತು ಮಕ್ಕಳಲ್ಲಿ ಉತ್ತಮ ಶುಚಿತ್ವದ ಅಭ್ಯಾಸವನ್ನು ರೂಢಿ ಮಾಡಲು ಬೇರೆ ಮಾರ್ಗಗಳಿವೆ ಎಂದು ಶಾಲಾಧಿಕಾರಿಗಳು ಮತ್ತು ಶಿಕ್ಷಕರು ಹೇಳುತ್ತಾರೆ.