ನವದೆಹಲಿ: ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯನ್ನಾಗಿ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮತ ಚಲಾಯಿಸುವ ಮೂಲಕ ಭಾರತ ದೊಡ್ಡ ತಪ್ಪು ಮಾಡಿದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯಂ ಸ್ವಾಮಿ ಹೇಳಿದ್ದು ಆ ಮೂಲಕ ಮತ್ತೊಮ್ಮೆ ಸ್ವಾಮಿ ಪಕ್ಷದ ನಿರ್ಧಾರದ ವಿರುದ್ಧ ಮಾತನಾಡಿದ್ದಾರೆ.
ಇನ್ನು ಸುಬ್ರಮಣಿಯಂ ಸ್ವಾಮಿ ಅವರ ಹೇಳಿಕೆಗೆ ಟ್ವೀಟರ್ ನಲ್ಲಿ ಅಪಾರ ಮಟ್ಟದಲ್ಲಿ ಭಾರತೀಯರು ಒಪ್ಪಿಗೆ ಸೂಚಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಜೆರುಸಲೇಂ ಅನ್ನು ಇಸ್ರೇಲ್ ನ ರಾಜಧಾನಿ ಎಂದು ಘೋಷಿಸಿದ್ದರು. ಅಮೆರಿಕದ ಈ ನಿರ್ಧಾರವನ್ನು ಸ್ವತಃ ವಿಶ್ವಸಂಸ್ಥೆಯೇ ವಿರೋಧಿಸಿತ್ತು.
ಇನ್ನು ಈ ಕುರಿತಂತೆ ವಿಶ್ವಸಂಸ್ಥೆಯಲ್ಲಿ ನಡೆದ ಮತದಾನದಲ್ಲಿ ಒಟ್ಟು 184 ಸದಸ್ಯ ರಾಷ್ಟ್ರಗಳ ಪೈಕಿ ಅಮೆರಿಕ ನಿರ್ಧಾರದ ವಿರುದ್ಧ ಒಟ್ಟು 128 ರಾಷ್ಟ್ರಗಳು ಮತ ಚಲಾಯಿಸಿವೆ. ಇನ್ನು 35 ರಾಷ್ಟ್ರಗಳು ಯಾವುದೇ ನಿರ್ಧಾರ ಕೈಗೊಳ್ಳದೇ ತಟಸ್ಥ ನಿಲುವು ಪ್ರದರ್ಶನ ಮಾಡಿದವು, ಇನ್ನುಳಿದ 21 ರಾಷ್ಟ್ರಗಳು ವಿಶ್ವಸಂಸ್ಥೆ ಸದನಕ್ಕೇ ಗೈರಾಗುವ ಮೂಲಕ ಪರೋಕ್ಷವಾಗಿ ಅಮೆರಿಕವನ್ನು ಕೈಬಿಟ್ಟಿವೆ. ಆ ಮೂಲಕ ವಿಶ್ವಸಂಸ್ಥೆ ಇತಿಹಾಸದಲ್ಲೇ ಅಮೆರಿಕಕ್ಕೆ ಮೊದಲ ಬಾರಿಗೆ ವಿಶ್ವಸಮುದಾಯದ ಎದುರು ಭಾರಿ ಮುಖಭಂಗವಾಗಿದೆ.