ನವದೆಹಲಿ: ಕಾಂಗ್ರೆಸ್ ಅಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ನಡೆಸಿದ ರಾಹುಲ್ ಗಾಂಧಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಹುಕೋಟಿ 2ಜಿ ಹಗರಣ ಸಂಬಂಧ ಸಿಬಿಐ ತೀರ್ಪು ಪ್ರಕಟಿಸಿದ್ದು ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಪ್ರತಿಯೊಬ್ಬರಿಗೂ 2ಜಿ ಬಗ್ಗೆ ಅರಿವಿದೆ. ಇದೀಗ ಸಿಬಿಐ ತೀರ್ಪಿನಿಂದ ಸತ್ಯವು ಹೊರ ಬಂದಿದ್ದು ಯುಪಿಎ ಸರ್ಕಾರದವಧಿಯಲ್ಲಿ ತಪ್ಪು ನಡೆದಿಲ್ಲ ಎಂಬುದು ಲೋಕಕ್ಕೆ ಅರ್ಥವಾಗಿದೆ ಎಂದರು.
ಸಿಬಿಐ ತೀರ್ಪಿನಿಂದಾಗಿ ಯುಪಿಎ ಸರ್ಕಾರದ ಮೇಲೆ ಬಿಜೆಪಿ ಮಾಡಿದ್ದ ಆರೋಪಗಳೆಲ್ಲಾ ಸುಳ್ಳು ಎಂಬುದು ಮನವರಿಕೆಯಾಗಿದೆ. ಬಿಜೆಪಿಗರು ಬರೀ ಸುಳ್ಳುಗಾರರು ಎಂಬುದು ಇದರಿಂದ ತಿಳಿಯುತ್ತದೆ. ಬಿಜೆಪಿಯ ಸಿದ್ಧಾಂತವೇ ಸುಳ್ಳಿನ ಮೇಲೆ ನಿಂತಿದೆ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇನ್ನು ಪ್ರಧಾನಿ ಮೋದಿ ಅವರ ಮೌನವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ, ಕಾಂಗ್ರೆಸ್ ವಿರುದ್ಧ ಆರೋಪ ಮಾಡುವ ಪ್ರಧಾನಿ ಮೋದಿ ಅವರು ರಫೆಲ್ ಒಪ್ಪಂದ ಕುರಿತು ಯಾಕೆ ಮೌನ ವಹಿಸಿದ್ದಾರೆ. ರಫೆಲ್ ಒಪ್ಪದ ಕುರಿತು ಆರೋಪ ಮಾಡಿದರು ಮೋದಿ ಬಾಯಿ ಬಿಡುತ್ತಿಲ್ಲ ಎಂದು ಆರೋಪಿಸಿದರು.
ಇನ್ನು ಪ್ರಧಾನಿ ಮೋದಿ ಅವರು ತಾವು ಪ್ರಧಾನಿಯಾದರೇ ಕಪ್ಪುಹಣವನ್ನು ಭಾರತಕ್ಕೆ ತರುತ್ತೇನೆ. ದೇಶದ ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಖಾತೆಗೂ 15 ಲಕ್ಷ ರುಪಾಯಿ ಜಮೆ ಮಾಡುವ ಭರವಸೆ ನೀಡಿದ್ದರು. ಆ ಭರವಸೆ ಏನಾಯಿತು, ನೋಟು ನಿಷೇಧ, ಗಬ್ಬರ್ ಸಿಂಗ್ ಟ್ಯಾಕ್ಸ್ ಹೀಗೆ ಪ್ರತಿಯೊಂದು ಮಾತು ಸುಳ್ಳಿನ ಕಂತೆಯಾಗಿದೆ ಎಂದರು.