ದೇಶ

ಕುಟುಂಬಸ್ಥರೊಂದಿಗಿನ ಜಾಧವ್ ಭೇಟಿ ಅಮಾನವೀಯ: ಪಾಕ್ ವಿರುದ್ಧ ರಕ್ಷಣಾ ತಜ್ಞರು ಕಿಡಿ

Manjula VN
ನವದೆಹಲಿ: ಭಾರತದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲ್'ಭೂಷಣ್ ಜಾಧವ್ ಹಾಗೂ ಅವರ ಕುಟುಂಬಸ್ಥರ ಭೇಟಿ ಅಮಾನವೀಯ ಎಂದು ಪಾಕಿಸ್ತಾನದ ವಿರುದ್ಧ ರಕ್ಷಣಾ ತಜ್ಞರು ಮಂಗಳವಾರ ತೀವ್ರವಾಗಿ ಕಿಡಿಕಾರಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ನಿವೃತ್ತ ಮೇಜರ್ ಜನರಲ್ ಜಿಡಿ ಬಕ್ಷಿಯವರು, ಪಾಕಿಸ್ತಾನ ವಿದೇಶಾಂಗ ಸಚಿವಾಲಯ ವಕ್ತಾರ ತಾವೊಬ್ಬ ಮದರ್ ತೆರೇಸಾ ಎಂಬಂತೆ ಇಂದು ಮಾತನಾಡುತ್ತಿದ್ದಾರೆ. ತನ್ನ ಅಮಾನವೀಯತೆಗೆ ಸಾಕ್ಷಿಯನ್ನು ಪಾಕಿಸ್ತಾನ ಇಂದು ಪ್ರದರ್ಶಿಸಿದೆ. ಒಬ್ಬ ತಾಯಿ 22 ವರ್ಷಗಳಿಂದ ತನ್ನ ಮಗನನ್ನು ನೋಡಿಲ್ಲ. ಸಾಕಷ್ಟು ನಿರೀಕ್ಷೆಗಳೊಂದಿಗೆ ತಾಯಿ ಹಾಗೂ ಪತ್ನಿ ಜಾಧವ್ ಅವರನ್ನು ಭೇಟಿ ಮಾಡಲು ಹೋಗಿದ್ದರೆ, ಗ್ಲಾಸ್ ಗಳ ಪರದೆ ಮಧ್ಯೆ ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆಂದು ಹೇಳಿದ್ದಾರೆ. 
ಜಾಧವ್ ಅವರನ್ನು ಪಾಕಿಸ್ತಾನ ಛಬಹಾರ್ ವಿಮಾನ ನಿಲ್ದಾಣದಲ್ಲಿ ಅಪಹರಣ ಮಾಡಿ ಕಿರುಕುಳ ನೀಡಿದೆ. ಬಳಿಕ ಬಲೂಚಿಸ್ತಾನಕ್ಕೆ ಕೊಂಡೊಯ್ದು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಕಿರುಕುಳ ನೀಡಿ ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಿದೆ. ಬಳಿಕ ಎಫ್'ಜಿಸಿಎಂ ನ್ಯಾಯಾಲಯ ಆತನಿಗೆ ಗಲ್ಲುಶಿಕ್ಷೆಯನ್ನು ವಿಧಿಸಿದೆ. ಜಾಧವ್ ವಿರುದ್ಧ ಪಾಕಿಸ್ತಾನ ಮಾಡುತ್ತಿರುವ ಆರೋಪಗಳಿಗೆ ಸಾಕ್ಷಿಗಳೇ ಇಲ್ಲ ಎಂದು ತಿಳಿಸಿದ್ದಾರೆ. 
ನಿವೃತ್ತ ಲೆಫ್ಟಿನಂಟ್ ಜನರಲ್ ರಾಜ್ ಕದ್ಯಾನ್ ಅವರು ಮಾತನಾಡಿ, ಈ ರೀತಿಯ ಭೇಟಿಯನ್ನು ಕುಟುಂಬ ಸದಸ್ಯರೊಂದಿಗಿನ ಭೇಟಿ ಎಂದು ಹೇಳಲು ಸಾಧ್ಯವಿಲ್ಲ. ಜಾಧವ್ ಅವರು ಪತ್ನಿ ಹಾಗೂ ತಾಯಿಯನ್ನು ಭೇಟಿಯಾಗಲು ಪಾಕಿಸ್ತಾನ ಅನುಮತಿ ನೀಡಿದೆ ಎಂಬಾಗ ಕೆಲ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಭೇಟಿ ಖಾಸಗಿಯಾಗಿ ನಡೆಯಲಿದೆ ಎಂದು ನಂಬಿದ್ದೆವು. ಆದರೆ, ಗ್ಲಾಸ್ ಪರದೆಯ ಮುಖಾಂತರ ಭೇಟಿ ನಡೆದಿದೆ. ಹೀಗಾಗಿ ಇನ್ನು ಕುಟುಂಬ ಸದಸ್ಯರೊಂದಿಗಿನ ಭೇಟಿ ಎಂದು ಕರೆಯಲು ಸಾಧ್ಯವಿಲ್ಲ ಎಂದಿದ್ದಾರೆ. 

ಜಾಧವ್ ಪ್ರಕರಣ ಸಂಬಂಧ ಜನವರಿ ತಿಂಗಳಿನಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಅಂದು ಪಾಕಿಸ್ತಾನ ಜಾಧವ್ ವಿರುದ್ಧ ಸಾಕ್ಷ್ಯಾಧಾರಗಳನ್ನು ಸಲ್ಲಿಸಬೇಕು. ಇಂತಹ ಭೇಟಿ ಅವಕಾಶಗಳನ್ನು ಕಲ್ಪಿಸುವ ಮೂಲಕ ವಿಶ್ವದ ಮುಂದೆ ತಾನು ಪ್ರಾಮಾಣಿಕ ಎಂದು ಪ್ರದರ್ಶಿಸಿಕೊಳ್ಳಲು ಪಾಕಿಸ್ತಾನ ಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ. 

ಕುಲಭೂಷಣ್​ ಜಾಧವ್​ಅವರು ಸೋಮವಾರ ಗಾಜಿನ ತಡೆಗೋಡೆ ಮಧ್ಯೆ ತಮ್ಮ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇಸ್ಲಾಮಾಬಾದ್​ನಲ್ಲಿರುವ ಪಾಕ್​ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ಭೇಟಿಗೆ ವ್ಯವಸ್ಥೆ ಮಾಡಲಾಗಿತ್ತು. ಇದರಂತೆ ನಿನ್ನೆ ಮಧ್ಯಾಹ್ನ 1.35ಕ್ಕೆ ಭೇಟಿಗೆ ಅವಕಾಶ ಮಾಡಿಕೊಡಲಾಯಿತು. ಸುಮಾರು 30 ನಿಮಿಷಗಳ ಕಾಲ ಜಾಧವ್,​ ತಾಯಿ ಮತ್ತು ಪತ್ನಿ ಜೊತೆ ಮಾತುಕತೆ ನಡೆಸಿದ್ದರು.
SCROLL FOR NEXT