ಕೇಂದ್ರ ಸಚಿವ ಹಂಸರಾಜ್ ಅಹಿರ್
ಮುಂಬೈ: ಪ್ರಜಾಪ್ರಭುತ್ವದಲ್ಲಿ ನಿಮಗೆ ನಿಂಬಿಕೆ ಇಲ್ಲ ಎಂದಾದರೆ ನೀವು ನಕ್ಸಲರನ್ನು ಸೇರಿ.. ಆಗ ನಾವು ಅವರಿಗೆ ಗುಂಡು ಹಾರಿಸುತ್ತೇವೆ ಎಂದು ಕೇಂದ್ರ ಗೃಹ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಹಂಸರಾಜ್ ಆಹಿರ್ ಹಿರಿಯ ವೈದ್ಯರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಚಂದ್ರಾಪುರ ಎಂಬಲ್ಲಿ ಆಯೋಜನೆಯಾಗಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದ ಹಂಸರಾಜ್ ಅಹಿರ್ ಅವರು, ಕಾರ್ಯಕ್ರಮಕ್ಕೆ ಹಿರಿಯ ವೈದ್ಯರುಗಳ ಗೈರು ಹಾಜರಿ ಕುರಿತಂತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ "ಈ ಜನರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲವೆಂದಾದರೆ ಅವರು ಮಾವೋವಾದಿಗಳ ಜತೆ ಸೇರಲಿ, ನಾವು ಅವರಿಗೆ ಗುಂಡಿಕ್ಕುತ್ತೇವೆ’’ ಎಂದು ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 93ನೇ ಜನ್ಮದಿನಾಚರಣೆಯ ಅಂಗವಾಗಿ ಚಂದ್ರಾಪುರದಲ್ಲಿನ ಸರಕಾರಿ ಆಸ್ಪತ್ರೆಯೊಂದರಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಕಾರ್ಯಾಚರಿಸುವ ಔಷಧಿ ಮಳಿಗೆಯೊಂದರ ಉದ್ಘಾಟನೆಗೆ ಸಚಿವರು ಆಗಮಿಸಿದ್ದರು. ಅಂತೆಯೇ ಉತ್ತಮ ಆಡಳಿತ ದಿನ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಈ ವೇಳೆ ಮೇಯರ್, ಉಪಮೇಯರ್ ಬಂದಿದ್ದಾರೆ, ಆದರೆ ಸಮಾರಂಭಕ್ಕೆ ಜಿಲ್ಲಾ ಸಿವಿಲ್ ಸರ್ಜನ್ ಉದಯ್ ನವಾಡೆ ಹಾಗೂ ಮೆಡಿಕಲ್ ಕಾಲೇಜ್ ಡೀನ್ ಎಸ್. ಎಸ್. ಮೋರೆ ಆಗಮಿಸಿರಲಿಲ್ಲ.
ಇದನ್ನು ಗಮನಿಸಿದ ಸಚಿವ ‘‘ನಕ್ಸಲರಿಗೇನು ಬೇಕು? ಅವರಿಗೆ ಪ್ರಜಾಪ್ರಭುತ್ವ ಬೇಡ. ಅಂತೆಯೇ ಇವರಿಗೆ (ಗೈರಾದ ವೈದ್ಯರು) ಪ್ರಜಾಪ್ರಭುತ್ವ ಬೇಡ. ಅವರು ನಕ್ಸಲರೊಂದಿಗೆ ಸೇರಬೇಕು. ನೀವೇಕೆ ಇಲ್ಲಿದ್ದೀರಿ ? ನಂತರ (ನೀವು ನಕ್ಸಲರ ಜತೆ ಸೇರಿದ ನಂತರ) ನಾವು ನಿಮಗೆ ಗೋಲಿ (ಗುಂಡು) ಹಾರಿಸುತ್ತೇವೆ. ನೀವೇಕೆ ಇಲ್ಲಿ ಗೋಲಿ ಹೊಡೆಯುತ್ತಿದ್ದೀರಿ (ವಂಚಿಸುತ್ತಿದ್ದೀರಿ)? ನಾನಿಲ್ಲಿ ಬಂದಾಗ ಈ ಜನರು ರಜೆಯಲ್ಲಿದ್ದಾರೆ. ನಾನೇನು ಹೇಳಲಿ ?’’ ಎಂದು ಸಚಿವ ಮರಾಠಿ ಭಾಷೆಯಲ್ಲಿ ಗುಡುಗಿದ್ದಾರೆ. ಪ್ರಜಾಫ್ರಭುತ್ವ ಮಾದರಿಯಲ್ಲಿ ಚುನಾಯಿತರಾದ ಸಚಿವರೊಬ್ಬರು ಭೇಟಿ ನೀಡಿರುವಾಗ ವೈದ್ಯರು ಗೈರಾಗಿರುವುದು ಸರಿಯೇ ಎಂದೂ ಅವರು ಪ್ರಶ್ನಿಸಿದ್ದಾರೆ.
ಹಂಸರಾಜ್ ಅಹಿರ್ ಅವರ ಈ ಹೇಳಿಕೆ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಕೇಂದ್ರ ಸಚಿವರ ಮಾತಿಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಈ ಹಿಂದಷ್ಟೇ ಇದೇ ಚಂದ್ರಾಪುರ ಜಿಲ್ಲೆಯನ್ನು ನಕ್ಸಲ್ ಪೀಡಿತ ಜಿಲ್ಲೆಯೆಂದು ಕೇಂದ್ರ ಗುರುತಿಸಿರುವುದನ್ನು ಇಲ್ಲಿ ಸ್ಮರಿಸಬಹುದು.