ಸಮುದ್ರದ ಮಧ್ಯದಲ್ಲಿ ಕೆಟ್ಟುನಿಂತ ಬೋಟ್: ಸಂಕಷ್ಟದಲ್ಲಿ ಸಿಲುಕಿದ್ದ 45 ಕನ್ನಡಿಗರ ರಕ್ಷಣೆ
ಪಣಜಿ: ಗೋವಾದ ಪಣಜಿ ಬಳಿಯಲ್ಲಿರುವ ಸಮುದ್ರದ ಮಧ್ಯದಲ್ಲಿ ಬೋಟ್'ವೊಂದು ಕೆಟ್ಟು ನಿಂತ ಪರಿಣಾಮ ಅಪಾಯದಲ್ಲಿ ಸಿಲುಕಿದ್ದ 45 ಮಂದಿ ತುಮಕೂರು ಪ್ರವಾಸಿಗರನ್ನು ಸೋಮವಾರ ರಕ್ಷಣೆ ಮಾಡಲಾಗಿದೆ.
ಕ್ರಿಸ್'ಮಸ್ ರಜೆ ಹಿನ್ನಲೆಯಲ್ಲಿ ತುಮಕೂರು ಎಸ್ಐಟಿ ಬಡಾವಣೆಯ 45 ಮಂದಿ ಗೋವಾ ರಾಜ್ಯ ಪ್ರವಾಸಕ್ಕೆ ಹೋಗಿದ್ದರು. ಪಣಜಿಯ ರಾಯಬಂದರಿನ ಕಡಲ ತೀರದಿಂದ ಪ್ರವಾಸಿ ಬೋಟಿನಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪ್ರವಾಸಿಗರು ವಿಹಾರಕ್ಕೆ ತೆರಳಿದ್ದಾರೆ. ಸಮುದ್ರದಲ್ಲಿ ಸುಮಾರು 13 ಕಿಮೀ ದೂರ ಹೋಗುತ್ತಿದ್ದಂತೆಯೇ ಇಂಜಿನ್ ಸಮಸ್ಯೆಯುಂಟಾಗಿ ಬೋಟು ಸಮುದ್ರದ ಮಧ್ಯೆ ಕೆಟ್ಟು ನಿಂತಿದೆ. ಬೋಟ್ ನಡೆಸುವವರು ಹರಸಾಹಸ ಮಾಡಿದರು ಬೋಟ್ ಸರಿಹೋಗಿಲ್ಲ.
ಬಳಿಕ ಪೊಲೀಸರು ಪ್ರವಾಸೋದ್ಯಮ ಇಲಾಖೆ, ಬೋಟಿನ ಮಾಲೀಕರಾರು ಇವರ ದೂರವಾಣಿ ಕರೆಗೆ ಸ್ಪಂದನೆ ನೀಡಿಲ್ಲ. ಬೋಟಿನಲ್ಲಿ 10 ಮಕ್ಕಳು ಸೇರಿದಂತೆ ಮಹಿಳೆಯರೂ ಇದ್ದರು. ಇದರಿಂದ ತೀವ್ರವಾಗಿ ಕಳವಳಗೊಂಡ ಪ್ರವಾಸಿಗರು ವಿಡಿಯೋ ಮಾಡಿ ರಾಜ್ಯ ಸುದ್ದಿವಾಹಿನಿಗಳಿಗೆ ಕಳುಹಿಸಿದ್ದಾರೆ. ಬಳಿಕ ರಾಜ್ಯ ಪೊಲೀಸರು ಗೋವಾ ಅಧಿಕಾರಿಗಳಿಗೆ ಮಾಹಿತಿ ನೀಡಿ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ.
ರಕ್ಷಣೆಗೊಂಡಿರುವ ಪ್ರಯಾಣಿಕ ಬಿ.ಎಂ ದಯಾನಂದ್ ಅವರು ಮಾತನಾಡಿ, 11 ಗಂಟೆ ಸುಮಾರಿಗೆ ಬೋಟನ್ನು ಹತ್ತಿದ್ದೆವು. 11 ಗಂಟೆ ಸುಮಾರಿಗೆ ಬೋಟನ್ನು ಹತ್ತಿ 12.30 ರವರೆಗೂ ವಿಹಾರ ನಡೆಸಿದ್ದೆವು. ಮಧ್ಯಾಹ್ನ 1.30ಕ್ಕೆ ಹಿಂತಿರುಗಿ ಬರುತ್ತಿದ್ದ ವೇಳೆ ತಾಂತ್ರಿಕ ಸಮಸ್ಯೆ ಎದುರಾಗಿ ಬೋಟು ಸಮುದ್ರದ ಮಾರ್ಗದ ಮಧ್ಯೆಯೇ ಕೆಟ್ಟು ನಿಂತಿತ್ತು. ಬಳಿಕ ಬೋಟು ನಡೆಸುವವರು ಸಾಕಷ್ಟು ಪ್ರಯತ್ನ ನಡೆಸಿದರೂ ಬೋಟು ಸರಿಹೋಗಲಿಲ್ಲ. ಬಳಿಕ ನಾವು ಪೊಲೀಸರನ್ನು ಸಂಪರ್ಕಿಸಲು ಯತ್ನಿಸಿದ್ದೆವು. ಕರೆಯನ್ನು ಸ್ವೀಕರಿಸಿದ ಪೊಲೀಸರು ನಮಗೆ ಯಾವುದೇ ಸಹಾಯವನ್ನು ಮಾಡಲಿಲ್ಲ. ಕೆಲ ಹೊತ್ತಿನ ಬಳಿಕ ಸ್ಥಳದಲ್ಲಿ ಜೋರಾಗಿ ಗಾಳಿ ಬೀಸಲು ಆರಂಭವಾಯಿತು. ಬೋಟು ಅಲುಗಾಡಲು ಆರಂಭಿಸಿತು. ಈ ವೇಳೆ ಎಲ್ಲರಲ್ಲೂ ಭೀತಿಯುಂಟಾಗಿತ್ತು ಎಂದು ಹೇಳಿದ್ದಾರೆ.
ಬಳಿಕ ವಿಡಿಯೋವನ್ನು ತೆಗೆದುಕೊಂಡು ನಮ್ಮ ರಾಜ್ಯ ಸುದ್ದಿ ವಾಹಿನಿಗಳಿಗೆ ಕಳುಹಿಸಿ, ನಮ್ಮ ಸಂಕಷ್ಟವನ್ನು ಹೇಳಿಕೊಂಡೆವು. ಕೆಲ ಹೊತ್ತಿನ ಬಳಿಕ ರಾಜ್ಯ ಪೊಲೀಸರು ಗೋವಾ ಅಧಿಕಾರಿಗಳಿಗೆ ಮಾಹಿತಿ ನೀಡಿ ಪರಿಸ್ಥಿತಿಯನ್ನು ವಿವರಿಸಿದರು. 5 ಗಂಟೆ ಸುಮಾರಿಗೆ ರಕ್ಷಣೆ ಮಾಡಲು ಖಾಸಗಿ ಬೋಟ್ ವೊಂದು ಬಂದಿತ್ತು. 6.30ರ ಸುಮಾರಿಗೆ ಎಲ್ಲರನ್ನೂ ರಕ್ಷಣೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಬೋಟಿನಲ್ಲಿ ಸಾಕಷ್ಟು ಮಂದಿ ತುಮಕೂರು ಜಿಲ್ಲೆ ಕುಣಿಗಲ್ ಮೂಲದವರಾಗಿದ್ದರು. ಇನ್ನು ಕೆಲವರು ಬೆಂಗಳೂರು ಮೂಲದವರಾಗಿದ್ದರು ಎಂದಿದ್ದಾರೆ.