ನವದೆಹಲಿ: ಗೂಢಚಾರಿಕೆ ಆರೋಪದಡಿ ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿರುವ ಕುಲಭೂಷಣ್ ಜಾಧವ್ ಭೇಟಿ ಸಂಬಂಧ ಆತನ ತಾಯಿ ಹಾಗೂ ಪತ್ನಿಯನ್ನು ಪಾಕಿಸ್ತಾನ ನಡೆಸಿಕೊಂಡ ರೀತಿಯ ಕುರಿತು ದೇಶಾದ್ಯಂತ ಅಸಮಾಧಾನ ವ್ಯಕ್ತವಾಗುತ್ತಿದ್ದು ಈ ಮಧ್ಯೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್ವಾಲ್ ಅಕ್ಷಮ್ಯ ಹೇಳಿಕೆ ನೀಡಿ ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪಾಕಿಸ್ತಾನ ಕುಲಭೂಷಣ್ ಜಾದವ್ ರನ್ನು ಭಯೋತ್ಪಾದಕ ಎಂದು ಪರಿಗಣಿಸಿದ್ದು ಅದರಂತೆ ನಡೆಸಿಕೊಳ್ಳುತ್ತಿದೆ. ಭಯೋತ್ಪಾದಕರು ಎನಿಸಿಕೊಂಡವರನ್ನು ಭಾರತ ಕೂಡಾ ಇದೇ ರೀತಿಯಲ್ಲಿ ನಡೆಸಿಕೊಳ್ಳಬೇಕು ಎಂದು ನರೇಶ್ ಅಗರ್ವಾಲ್ ಹೇಳಿದ್ದಾರೆ.
ಇನ್ನು ಇದೇ ವೇಳೆ ಪಾಕಿಸ್ತಾನಿ ಜೈಲುಗಳಲ್ಲಿ ಸಾಕಷ್ಟು ಮಂದಿ ಭಾರತೀಯರು ಶಿಕ್ಷೆಗೆ ಗುರಿಯಾಗಿದ್ದಾರೆ. ಇಂತರ ಸಂದರ್ಭದಲ್ಲಿ ಕೇವಲ ಜಾದವ್ ವಿಚಾರ ಮಾತ್ರವೇ ಮಾಧ್ಯಮಗಳಲ್ಲಿ ಯಾಕೆ ಸುದ್ದಿಯಾಗುತ್ತಿದೆ ಎಂದು ಅಗರ್ವಾಲ್ ಪ್ರಶ್ನಿಸಿದರು.
ನರೇಶ್ ಅಗರ್ವಾಲ್ ಹೇಳಿಕೆಯಿಂದ ಸಮಾಜವಾದಿ ಪಕ್ಷ(ಎಸ್ಪಿ)ಗೆ ಸಾಕಷ್ಟು ಮುಖಭಂಗವಾಗಿದ್ದು ಈ ನಿಟ್ಟಿನಲ್ಲಿ ಪಕ್ಷದಿಂದ ಯಾವುದೇ ಸ್ಪಷ್ಟನೆ ಹೊರಬಂದಿಲ್ಲ.