ನವದೆಹಲಿ: ನಮ್ಮ ದೇಶದ ಅಡಿಪಾಯವಾಗಿರುವ ಸಂವಿಧಾನ ಅಪಾಯದಲ್ಲಿದ್ದು, ಸಂವಿಧಾನದ ಮೇಲೆ ನೇರ ದಾಳಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ 133ನೇ ಸ್ಥಾಪನಾ ದಿನದ ಅಂಗವಾಗಿ ದೆಹಲಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನದ ವಿರುದ್ಧವಾಗಿ ಬಿಜೆಪಿಯ ಹಿರಿಯ ಸದಸ್ಯರು ಮಾತನಾಡಿರುವುದು ನೋಡಿದರೆ ಬಿಜೆಪಿ ನಿಧಾನವಾಗಿ ಸಂವಿಧಾನದ ಮೇಲೆ ದಾಳಿ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಸಂವಿಧಾನವನ್ನು ರಕ್ಷಿಸುವುದು ಕಾಂಗ್ರೆಸ್ ಪಕ್ಷ ಮತ್ತು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದರು.
ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು,ಇಂದು ನಮ್ಮ ದೇಶದಲ್ಲಿ ನಡೆಯುತ್ತಿರುವ ಘಟನೆ ವ್ಯವಸ್ಥಿತಿ ಸಂಚು. ರಾಜಕೀಯ ಲಾಭಕ್ಕಾಗಿ ಮೂಲ ತತ್ವವನ್ನು ಬಳಸಿಕೊಳ್ಳುವ ಬಿಜೆಪಿ ಸುಳ್ಳಿನ ಸರಮಾಲೆಯನ್ನೇ ಜನರ ಮುಂದಿಡುತ್ತಿದೆ. ಇದುವೇ ಬಿಜೆಪಿಯವರಿಗೆ ಮತ್ತು ನಮಗಿರುವ ವ್ಯತ್ಯಾಸ ಎಂದರು. ನಾವು ಉತ್ತಮವಾಗಿ ಮಾಡದಿರಬಹುದು, ನಾವು ಸೋತಿರಬಹುದು, ಆದರೆ ನಾವು ಸತ್ಯವನ್ನು ಯಾವತ್ತಿಗೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ವಹಿಸಿಕೊಂಡ ನಂತರ ಇದು ಮೊದಲ ಕಾಂಗ್ರೆಸ್ ನ ಸ್ಥಾಪನಾ ದಿನಾಚರಣೆಯಾಗಿದೆ. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿತಿಂಡಿ ಹಂಚಲಾಯಿತು.