ನ್ಯಾಯಾಲಯದ ಪ್ರಮುಖ ತೀರ್ಪುಗಳು
ಮೊನ್ನೆಯಷ್ಟೇ 2017 ನ್ನು ಹೊಸವರ್ಷವನ್ನಾಗಿ ಆಚರಿಸಿದಂತಿದೆ. ಆಗಲೇ 2018 ರ ಹೊಸ್ತಿಲಲ್ಲಿ ನಿಂತಿದ್ದೇವೆ, ಕಾಲದ ಓಟವೆಂದರೆ ಹಾಗೆಯೇ ಕಣ್ಣುಮುಚ್ಚಿ ತೆಗೆಯುವುದರೊಳಗೆ ದಿನಗಳು, ವರ್ಷಗಳು ಸಾಗಿ ಹೋಗಿರುತ್ತವೆ. 2017 ರಲ್ಲಿ ನಡೆದ ಪ್ರಮುಖ ಘಟನಾವಳಿಗಳಲ್ಲಿ ನ್ಯಾಯಾಲಯಗಳ ಕೆಲವು ತೀರ್ಪುಗಳೂ ಸಹ ಬಿಗ್ ನ್ಯೂಸ್ ಆಗಿದ್ದವು. ಅವುಗಳ ಹಿನ್ನೋಟ ಹೀಗಿದೆ.
ಇನ್ನೂ ಬಗೆಹರಿಯದೇ ಇರುವ ಪ್ರಕರಣಗಳು:
ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಒಟ್ಟು 26 ಮಿಲಿಯನ್ ಗೂ ಹೆಚ್ಚು ಪ್ರಕರಣಗಳು ದೇಶದ ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಹಾಗೆಯೇ ಉಳಿದಿವೆ. ಈ ಪೈಕಿ 2 ಮಿಲಿಯನ್ ಪ್ರಕರಣಗಳು 10 ವರ್ಷಗಳಿಂದ ಇತ್ಯರ್ಥವಾಗದೇ ಕೊಳೆಯುತ್ತಿವೆ.
ಸುಪ್ರೀಂ ಕೋರ್ಟ್ ಪ್ರಕಟಿಸಿದ್ದ ಅತ್ಯಂತ ಮಹತ್ವದ, ದೇಶಾದ್ಯಂತ ಅತಿ ಹೆಚ್ಚು ಚರ್ಚೆಗೊಳಗಾದ, ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದ ತೀರ್ಪೆಂದರೆ ಅದು ತ್ರಿವಳಿ ತಲಾಖ್ ತೀರ್ಪು. ಮುಸ್ಲಿಂ ಮಹಿಳೆಯರ ವಿರುದ್ಧ ಎಗ್ಗಿಲ್ಲದೇ ಪ್ರಯೋಗವಾಗುತ್ತಿದ್ದ ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಬರುವ ತ್ರಿವಳಿ ತಲಾಖ್ ನ್ನು ಆ.22 ರಂದು ತ್ರಿವಳಿ ತಲಾಖ್ ಅನ್ನು ರದ್ದುಗೊಳಿಸಿತ್ತು. ಸಾಂವಿಧಾನಿಕ ಪೀಠದ ಪಂಚ ಸದಸ್ಯರ ಪೈಕಿ ಇಬ್ಬರು ಸದಸ್ಯರು ತ್ರಿವಳಿ ತಲಾಖ್ ಗೆ ಅನುಮೋದನೆ ನೀಡಿದ್ದು, ಉಳಿದ ಮೂವರು ನ್ಯಾಯಾಧೀಶರು ಮುಸ್ಲಿಂ ವೈಯುಕ್ತಿಕ ಕಾನೂನಿಗೆ ಸಂವಿಧಾನ ಮಾನ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಅದರಂತೆ ಬಹುಮತದ ಆಧಾರದ ಮೇಲೆ ತ್ರಿವಳಿ ತಲ್ಲಾಖ್ ಅನ್ನು 6 ತಿಂಗಳ ಕಾಲ ರದ್ದು ಮಾಡಿ, 6 ತಿಂಗಳೊಳಗೆ ಈ ಬಗ್ಗೆ ಸೂಕ್ತ ಕಾನಾನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲಾಗಿತ್ತು. ಸೂಚನೆಯಂತೆಯೇ ಇತ್ತೀಚೆಗಷ್ಟೇ ಸಂಸತ್ ನಲ್ಲಿ ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ಮಸೂದೆಯೊಂದನ್ನು ಕೇಂದ್ರ ಸರ್ಕಾರ ಮಂಡಿಸಿದೆ.
ಆಧಾರ್ ನೋಂದಣಿಗಾಗಿ ಜನರು ತಮ್ಮ ಬೆರಳಚ್ಚು, ಕಣ್ಣು ಪಾಪೆಯ ಗುರುತುಗಳು ಮತ್ತು ವೈಯಕ್ತಿಕ ಮಾಹಿತಿಗಳನ್ನು ಸರ್ಕಾರಕ್ಕೆ ನೀಡಬೇಕು. ಆದರೆ ಈ ಮಾಹಿತಿಗಳನ್ನು ವಾಣಿಜ್ಯ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಹಾಗಾಗಿ ಇದು ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತಿದೆ ಎಂದು ಆಧಾರ್ ಕಡ್ಡಾಯಗೊಳಿಸುವಿಕೆಯನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಖಾಸಗಿತದ ಹಕ್ಕು ಸಂವಿಧಾನ ನೀಡಿರುವ ಮೂಲಭೂತ ಹಕ್ಕಿನ ಭಾಗವೇ ಆಗಿದೆ ಎಂದು ಸರ್ವಾನುಮತದಿಂದ ಮಹತ್ವದ ತೀರ್ಪು ನೀಡಿತ್ತು. ಎಲ್ಲ ಭಾರತೀಯರ ಬದುಕಿನ ಮೇಲೆ ಪರಿಣಾಮ ಬೀರುವಂತಹ ಚಾರಿತ್ರಿಕ ತೀರ್ಪು ಪ್ರಕಟಗೊಂಡಿದ್ದು 2017 ರ ಆ.25 ರಂದು.
ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯ ಅತ್ಯಾಚಾರ ಪ್ರಕರಣ 2017 ರಲ್ಲಿಯೂ ಸುದ್ದಿ ಮಾಡಿತ್ತು. 2012ರ ಡಿಸೆಂಬರ್ 16ರಂದು 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶವೇ ತಲೆತಗ್ಗಿಸುವಂತೆ ಮಾಡಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿ ಹೈ ಕೋರ್ಟ್ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಮುಖೇಶ್(27), ಪವನ್ (20), ವಿನಯ್ (21) ಹಾಗೂ ಅಕ್ಷಯ್ (29) ವಿರುದ್ಧ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಈ ನಾಲ್ವರು ಮೇಲ್ಮನವಿ ಸಲ್ಲಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2017 ರ ಮೇ ತಿಂಗಳಲ್ಲಿ ವಿಚಾರಣೆಯ ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್ ಕೆಳ ಹಂತದ ನ್ಯಾಯಾಲಯ ನೀಡಿದ್ದ ಮರಣ ದಂಡನೆ ತೀರ್ಪನ್ನೇ ಎತ್ತಿ ಹಿಡಿದಿತ್ತು. ಸುಪ್ರೀಂ ಕೋರ್ಟಿನ ತೀರ್ಪು ಪ್ರಕಟವಾಗುತ್ತಿದ್ದಂತೆ ನ್ಯಾಯಾಲಯದಲ್ಲಿ ಹಾಜರಾಗಿದ್ದವರೆಲ್ಲರೂ ಚಪ್ಪಾಳೆ ತಟ್ಟುವ ಮೂಲಕ ತೀರ್ಪನ್ನು ಸ್ವಾಗತಿಸಿದ್ದರು.
ರಾಮ್ ರಹೀಮ್ ಅತ್ಯಾಚಾರ ಪ್ರಕರಣ
ಸ್ವಯಂಘೋಷಿತ ಆಧ್ಯಾತ್ಮಿಕ ಗುರು ರಾಮ್ ರಹೀಮ್ 2002ರಲ್ಲಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವುದು ಸಾಬೀತಾಗಿತ್ತು. ಆರೋಪ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಆ.28 ರಂದು 20 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಹೈ ಪ್ರೊಫೈಲ್ ಪ್ರಕರಣದಲ್ಲಿ ಸಾಕಷ್ಟು ಹಿಂಸಾಚಾರಗಳೂ ನಡೆದಿದ್ದವು. ಅತ್ಯಾಚಾರ ಪ್ರಕರಣಗಳ ತೀರ್ಪಿನಲ್ಲಿ 2017 ರಲ್ಲಿ ಸುದ್ದಿಯಾಗಿದ್ದರ ಪ್ರಕರಣಗಳ ಪೈಕಿ ರಾಮ್ ರಾಹೀಮ್ ಪ್ರಕರಣವೂ ಇದೆ.
ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ 2008 ರಲ್ಲಿ ನೊಯಿಡಾದಲ್ಲಿ ನಡೆದಿದ್ದ ಆರುಷಿ–ಹೇಮರಾಜ್ ಕೊಲೆ ಪ್ರಕರಣದಲ್ಲಿ ಆರುಷಿ ಪೋಷಕರಾದ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಅವರನ್ನು ಅಲಹಾಬಾದ್ ಹೈಕೋರ್ಟ್ 2017 ರ ಅ.12 ರಂದು ಖುಲಾಸೆಗೊಳಿಸಿತ್ತು. ವೃತ್ತಿಯಲ್ಲಿ ದಂತವೈದ್ಯರಾಗಿರುವ ರಾಜೇಶ್ ಮತ್ತು ನೂಪುರ್ ತಲ್ವಾರ್ ಅವರ ನೊಯಿಡಾ ನಿವಾಸದಲ್ಲಿ 2008ರ ಮೇ 16ರಂದು ಅವರ ಪುತ್ರಿ ಆರುಷಿ ಶವ ಪತ್ತೆಯಾಗಿತ್ತು. ಒಂದು ದಿನದ ಬಳಿಕ ಮನೆಯ ಕೆಲಸಗಾರ ಹೇಮರಾಜ್ ಶವ ಮನೆಯ ಚಾವಣಿಯಲ್ಲಿ ಪತ್ತೆಯಾಗಿತ್ತು. ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ ಈ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿತ್ತು. ಆರುಷಿ ಮತ್ತು ಹೇಮರಾಜ್ ಅವರನ್ನು ತಲ್ವಾರ್ ದಂಪತಿ ಹತ್ಯೆ ಮಾಡಿದ್ದಾರೆ ಎಂದು 2013ರಲ್ಲಿ ಹೇಳಿದ್ದ ಸಿಬಿಐ ವಿಶೇಷ ನ್ಯಾಯಾಲಯ, ಇಬ್ಬರಿಗೂ ಜೀವವಾಧಿ ಶಿಕ್ಷೆ ವಿಧಿಸಿತ್ತು.
2017 ರಲ್ಲಿ ಪ್ರಕಾಟವಾದ ತೀರ್ಪುಗಳ ಪೈಕಿ ಅತ್ಯಂತ ಅಚ್ಚರಿ ಹುಟ್ಟಿಸಿದ, ಜನರ ನಿರೀಕ್ಷೆಗೆ ತದ್ವಿರುದ್ಧಾಗಿ ಬಂದ ತೀರ್ಪು ಎಂದರೆ ಅದು ಡಿ.21 ರಂದು ಪ್ರಕಟವಾದ 2 ಜಿ ಹಗರಣದ ತೀರ್ಪು ದೇಶಾದ್ಯಂತ ಅಚ್ಚರಿ ಮೂಡಿಸಿತ್ತು. ಮಾಜಿ ಕೇಂದ್ರ ಸಚಿವ ಸಚಿವ ಎ.ರಾಜಾ ಸೇರಿದಂತೆ ಹಲವರು ಈ ಪ್ರಕರಣದಲ್ಲಿ ಜೈಲು ಸೇರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಸಿಬಿಐನ ದಿಲ್ಲಿಯ ವಿಶೇಷ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿತ್ತು.