2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಭಾರತದ ವಿದೇಶಾಂಗ ನೀತಿಯಲ್ಲಿ ಹಲವು ಬದಲಾವಣೆಗಳಾಗಿವೆ.
ಮೋದಿ ಸರ್ಕಾರ ಬಂದ ನಂತರ ಗಡಿ ಪ್ರದೇಶದಲ್ಲಿ ತನ್ನ ಉಪಟಳವನ್ನು ಹೆಚ್ಚಿಸಿರುವ ಚೀನಾ 2017 ರಲ್ಲಿ ಡೋಕ್ಲಾಮ್ ನಲ್ಲಿ ತನ್ನ ಸೇನೆಯನ್ನು ನಿಯೋಜಿಸಿ ಭಾರತದ ಮೇಲೆ ಒತ್ತಡ ಹೇರಲು ಯತ್ನಿಸಿತ್ತು. ತಿಂಗಳುಗಳ ಕಾಲ ಮುಂದುವರೆದಿದ್ದ ಡೊಕ್ಲಾಮ್ ವಿವಾದದಿಂದ ಸಣ್ಣ ಪ್ರಮಾಣದ ಯುದ್ಧ ಸಂಭವಿಸಿದರೂ ಅಚ್ಚರಿ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿತ್ತು. ಆದರೆ ಅಂತಿಮವಾಗಿ ಭಾರತ ಚೀನಾದ ಬೆದರಿಕೆಗಳನ್ನು ನಿರ್ಲಕ್ಷಿಸುವ ಮೂಲಕ ಚೀನಾಗೆ ತಕ್ಕ ಪಾಠ ಕಲಿಸಿ, ವಿದೇಶಾಂಗ ನೀತಿಯಲ್ಲಿ ಮತ್ತೊಮ್ಮೆ ಚಾಣಾಕ್ಷತನ ಪ್ರದರ್ಶಿಸಿತ್ತು. ಭಾರತದ ರಾಜತಾಂತ್ರಿಕ ನಡೆಗೆ ಅಂತಾರಾಷ್ಟ್ರೀಯ ಸಮುದಾಯವೂ ಮೆಚ್ಚುಗೆ ವ್ಯಕ್ತಪಡಿಸಿತ್ತು.
ಒಬಿಒಆರ್ ವಿಷಯದಲ್ಲಿ ಭಾರತಕ್ಕೆ ಅಮೆರಿಕ ಬೆಂಬಲ!
ಚೀನಾದ ಮಹತ್ವಾಕಾಂಕ್ಷಿ ಯೋಜನೆಗಳಾದ ಒನ್ ಬೆಲ್ಟ್ ಒನ್ ರೋಡ್ (ಒಬಿಒಆರ್) ಹಾಗೂ ಚೀನಾ-ಪಾಕ್ ಎಕನಾಮಿಕ್ ಕಾರಿಡಾರ್ (ಸಿಪಿಇಸಿ) ಗೆ ಭಾರತದ ವಿರೋಧಕ್ಕೆ ಅಮೆರಿಕ ಬೆಂಬಲ ವ್ಯಕ್ತಪಡಿಸಿತ್ತು. ಚೀನಾದ ಈ ಯೋಜನೆಗಳು ಭಾರತದ ವಿವಾದದ ಪ್ರದೇಶದಲ್ಲಿ ಹಾದುಹೋಗುತ್ತಿದ್ದು, ಇದು ಪ್ರಾದೇಶಿಕ ಸಾರ್ವಭೌಮತ್ವಕ್ಕೆ ಧಕ್ಕೆಯಾಗಲಿದೆ ಎಂದು ಅಮೆರಿಕ ಸಂದೇಶ ರವಾನಿಸಿತ್ತು. ಮೇ ತಿಂಗಳಲ್ಲಿ ಚೀನಾ ಬೆಲ್ಟ್ ಮತ್ತು ರೋಡ್ ಫೋರಂ ಸಭೆಯನ್ನು ನಡೆಸಿ ಎಲ್ಲಾ ದೇಶಗಳಿಗೂ ಆಹ್ವಾನ ನೀಡಿತ್ತು. ಆದರೆ, ಭಾರತ ಮಾತ್ರ ಈ ಸಭೆಯನ್ನು ಧಿಕ್ಕರಿಸಿತ್ತು. ಒಬಿಒಆರ್ ಯೋಜನೆಯಡಿಯಲ್ಲೇ ಬರುವ ಸಿಪಿಇಸಿ ಯೋಜನೆಯು ತನ್ನ ಸಾರ್ವಭೌಮತೆಗೆ ಧಕ್ಕೆಯಾಗುತ್ತದೆ ಎಂಬ ಕಾರಣ ಕೊಟ್ಟು ಈ ಯೋಜನೆಯನ್ನು ವಿರೋಧಿಸಿತ್ತು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಚೀನಾ, ನಂತರ ದೋಕಲಂ ವಿಚಾರಕ್ಕೆ ಕೈ ಹಾಕಿ ಭಾರತದ ವಿರುದ್ಧ ಜಟಾಪಟಿಗೆ ನಿಂತಿತ್ತು.
ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸಿರುವ ಆರೋಪದಲ್ಲಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಬಂಧನಕ್ಕೊಳಗಾಗಿತ್ತು. ಕುಲಭೂಷಣ್ ಜಾಧವ್ ಅವರಿಗೆ ಪಾಕ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಅಷ್ಟೇ ಅಲ್ಲದೇ ಕೌನ್ಸಿಲರ್ ಆಕ್ಸಿಸ್ ನೀಡದೇ ಸತಾಯಿಸಿತ್ತು. ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಸರ್ಕಾರ ಪಾಕ್ ನಡೆಯನ್ನು ಪ್ರಶ್ನಿಸಿ, ಕುಲಭೂಷಣ್ ಜಾಧವ್ ಗೆ ಗಲ್ಲು ಶಿಕ್ಷೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಸಂದ ಜಯವಾಗಿತ್ತು.
ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಭಾರತದ ದಲ್ವೀರ್ ಭಂಡಾರಿ ಪುನರಾಯ್ಕೆ
ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಭಾರತದ ದಲ್ವೀರ್ ಭಂಡಾರಿ ಪುನರಾಯ್ಕೆಗೊಂಡಿದ್ದು ಭಾರತಕ್ಕೆ 2017 ರಲ್ಲಿ ಭಾರತಕ್ಕೆ ಸಂದ ಮತ್ತೊಂದು ಜಯವಾಗಿತ್ತು. ನೆದರ್ಲೆಂಡ್ ರಾಜಧಾನಿ ಹೇಗ್ ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಭಾರತದ ದಲ್ವೀರ್ ಸಿಂಗ್ ಪುನರಾಯ್ಕೆಯಾಗುವುದು ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪ್ರತಿಷ್ಠೆಯ ವಿಷಯವಾಗಿತ್ತು. ಅಂತರಾಷ್ಟ್ರೀಯ ನ್ಯಾಯಾಲಯದ ಕೊನೆಯ ನ್ಯಾಯಾಧೀಶರ ಸ್ಥಾನಕ್ಕೆ ಬ್ರಿಟನ್ ಕೂಡಾ ನಾಮಪತ್ರ ಸಲ್ಲಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಬ್ರಿಟನ್ ತನ್ನ ನಾಮಪತ್ರ ಹಿಂತೆಗೆದುಕೊಂಡಿದ್ದರಿಂದ ಭಾರತದ ದಲ್ವೀರ್ ಸಿಂಗ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಬ್ರಿಟನ್ ವಿರುದ್ಧ ಇದು ಭಾರತಕ್ಕೆ ರಾಜತಾಂತ್ರಿಕ ಗೆಲುವಾಗಿತ್ತು.