2017ರಲ್ಲಿ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ರಾಜಕೀಯ, ತಂತ್ರಜ್ಞಾನ ಸೇರಿದಂತೆ ಹಲವು ವಿಭಾಗಗಳ ಕೆಲ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ ಆಗಿದ್ದವು. ಅಂತಹ ಸುದ್ದಿಗಳ ಸಣ್ಣ ಪಟ್ಟಿ ಇಲ್ಲಿದೆ.
ಚಾಂಪಿಯನ್ಸ್ ಟ್ರೋಫಿ ಬಳಿಕ ಪಾಂಡ್ಯಾ ಮಾಡಿದ್ದ ಟ್ವೀಟ್
2017ರ ಜೂನ್ ನಲ್ಲಿ ಭಾರತ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿ ಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ ಫೈನಲ್ ತಲುಪಿತ್ತು. ಆದರೆ ಫೈನಲ್ ನಲ್ಲಿ ಪಾಕಿಸ್ತಾನದ ವಿರುದ್ಧ ವಿರೋಚಿತ ಸೋಲು ಅನುಭವಿಸಿ ಮುಖಭಂಗ ಅನುಭವಿಸಿತ್ತು. ಈ ಪಂದ್ಯದಲ್ಲಿ ಭಾರತ ತಂಡದ ಎಲ್ಲ ಆಟಗಾರರೂ ವಿಫಲರಾದರೂ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಹಾರ್ದಿಕ್ ಪಾಂಡ್ಯಾ ಫೈನಲ್ ನಲ್ಲಿ ಮಿಂಚು ಹರಿಸುವ ಮೂಲಕ ಭಾರತಕ್ಕೆ ಗೆಲುವಿನ ಆಸೆ ಚಿಗುರೊಡೆಸಿದ್ದರು. ಹಾರ್ದಿಕ್ ಪಾಂಡ್ಯಾ 43 ಎಸೆತಗಳಲ್ಲಿ 76 ರನ್ ಸಿಡಿಸಿದ್ದರು. ಅವರ ಈ ಭರ್ಜರಿ ಆಟದಲ್ಲಿ 6 ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸಿದ್ದರು. ಆದರೆ ತಂಡದ ಆಟಗಾರ ರವೀಂದ್ರ ಜಡೇಜಾ ಅವರ ಅಜಾಗರೂಕ ನಡೆಯಿಂದ ಪಾಂಡ್ಯಾ ರನ್ ಔಟ್ ಆಗಿದ್ದರು. ಇದೇ ಬೇಸರದಲ್ಲಿ ಪೆವಿಲಿಯನ್ ಸೇರಿದ ಬಳಿಕ ಪಾಂಡ್ಯಾ ಯಾರೊಂದಿಗೂ ಮಾತನಾಡದೇ ಟ್ವಿಟರ್‌ನಲ್ಲಿ ರೀಟ್ವೀಟ್ ಮಾಡಿಕೊಳ್ಳುತ್ತಾ ಬ್ಯುಸಿಯಾಗಿದ್ದರು. ಪಂದ್ಯದ ಕುರಿತಂತೆ ಟ್ವೀಟ್ ಮಾಡಿದ್ದ ಹಾರ್ದಿಕ್ ಪಾಂಡ್ಯಾ, ನಮ್ಮವರೇ ನಮ್ಮನ್ನು ಬರ್ಬಾದ್ ಮಾಡಿದರು, ಬೇರೆಯವರಿಗೆ ಆ ತಾಕತ್ತು ಎಲ್ಲಿತ್ತು ಎಂದು ಆಕ್ರೋಶ ಭರಿತರಾಗಿ ಟ್ವೀಟ್ ಮಾಡಿದ್ದರು. ಆ ಟ್ವೀಟ್ ವ್ಯಾಪಕ ವೈರಲ್ ಆಗಿ, ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಪಾಂಡ್ಯಾ ಟ್ವೀಟ್ ಡಿಲೀಟ್ ಮಾಡಿದ್ದರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ವ್ಯಾಪಕ ವೈರಲ್ ಆಗಿದ್ದವು. ಹಾರ್ದಿಕ್ ಪಾಂಡ್ಯಾ ಟ್ವೀಟ್ ಅನ್ನು ಪ್ರಿಂಟ್ ಸ್ಕ್ರೀನ್ ತೆಗೆದುಕೊಂಡಿದ್ದ ಕೆಲ ಟ್ವೀಟಿಗರು ಅದನ್ನೇ ಅಪ್ಲೋಡ್ ಮಾಡಿ ವ್ಯಾಪಕ ಚರ್ಚೆ ನಡೆಸುತ್ತಿದ್ದಾರೆ. ಪಾಂಡ್ಯಾ ರನ್ ಔಟ್ ಗೆ ರವೀಂದ್ರ ಜಡೇಜಾ ಅವರೇ ಕಾರಣ ಎಂಬ ಅರ್ಥದಲ್ಲಿ ಜಡ್ಡು ವಿರುದ್ಧ ವ್ಯಾಪಕ ಟೀಕೆಗಳು ಹರಿದುಬಂದಿದ್ದವು.
ಮಗುವಿಗೆ ಪಾಠ ಮಾಡುವ ತಾಯಿಯ ವಿಡಿಯೋ ಅಪ್ಲೋಡ್ ಮಾಡಿ ಗಾಯಕನ ಅಸಮಾಧಾನಕ್ಕೆ ಕಾರಣರಾಗಿದ್ದ ಕೊಹ್ಲಿ
ಕಳೆದ ಆಗಸ್ಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಸಹ ಆಟಗಾರರಾದ ಶಿಖರ್ ಧವನ್, ಯುವರಾಜ್ ಸಿಂಗ್ ಮತ್ತು ರಾಬಿನ್ ಉತ್ತಪ್ಪ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮಗುವಿಗೆ ಪಾಠ ಹೇಳಿಕೊಡುವಾಗ ತಾಯಿಯ ಕಠಿಣ ವರ್ತನೆಯಿದ್ದ ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಅಲ್ಲದೆ ಮಕ್ಕಳ ಜೊತೆ ಮೃಗೀಯ ವರ್ತನೆ ನಿಲ್ಲಿಸಿ ಎಂದು ಮನವಿ ಮಾಡಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಆಗಿ ತಾಯಿಯ ಕಠಿಣ ವರ್ತನೆ ವಿರುದ್ಧ ವ್ಯಾಪಕ ಟೀಕೆಗಳು ಕೂಡ ವ್ಯಕ್ತವಾಗಿದ್ದವು. ಆದರೆ ಬಳಿಕ ಆ ವಿಡಿಯೋದಲ್ಲಿದ್ದ ಪುಟ್ಟ ಹುಡುಗಿ ಬಾಲಿವುಡ್ ಗಾಯಕರಾದ ತೋಷಿ ಮತ್ತು ಶರಿಬ್ ಸಬ್ರಿ ಅವರ ಸಹೋದರಿಯ ಪುತ್ರಿ ಎಂದು ತಿಳಿದುಬಂತು. ಮೂರು ವರ್ಷ ವಯಸ್ಸಿನ ಹಯಾಳಿಗೆ ತಾಯಿ ಪಾಠ ಮಾಡುತ್ತಿದ್ದರು. ಕ್ರಿಕೆಟಿಗರ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದ ಬಾಲಿವುಡ್ ಗಾಯಕ ತೋಷಿ ಒಂದೂವರೆ ನಿಮಿಷದ ಈ ವೀಡಿಯೋದಲ್ಲಿ ತಾಯಿಯೊಬ್ಬಳಿಗೆ ತನ್ನ ಮಗುವಿನ ಮೇಲಿನ ಪ್ರೀತಿಯ ಬಗ್ಗೆ ಪ್ರಶ್ನಿಸಲಾಗದು ಎಂದು ಕಿಡಿಕಾರಿದ್ದರು, ಅಲ್ಲದೆ ನಮ್ಮ ಸೋದರಿ ಮಗಳು ಹಯಾ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಹಯಾಳನ್ನು ಬಯ್ದರೆ ಕೆಲ ಕ್ಷಣದಲ್ಲೇ ಅದನ್ನು ಮರೆತುಬಿಟ್ಟು ಆಟವಾಡಲು ಓಡುತ್ತಾಳೆ. ಆದರೆ, ಹಾಗೆಂದು ಅವಳನ್ನು ಕೇವಲ ಮುದ್ದು ಮಾಡಿದರೆ ಆಕೆ ಓದಿನ ಬಗ್ಗೆ ನಿರ್ಲಕ್ಷ್ಯ ತಳೆಯುವುದಿಲ್ಲವೇ?, ಆಮೇಲೆ ಆಕೆ ಓದಲು ಬರೆಯಲು ಕಷ್ಟ ಪಡಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಗಾಯಕರ ಈ ಹೇಳಿಕೆಗೆ ವ್ಯಾಪಕ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.
ರಾಹುಲ್ ಗಾಂಧಿ ಟ್ವಿಟರ್ ಜನಪ್ರಿಯತೆ: ವೈರಲ್ ಆದ ಸ್ಮೃತಿ ಇರಾನಿ-ರಮ್ಯಾ ಟ್ವೀಟ್ ವಾರ್
ಈ ಹಿಂದೆ ಒಂದಿಲ್ಲೊಂದು ವಿಚಾರಕ್ಕೆ ಅಪಹಾಸ್ಯಕ್ಕೀಡಾಗುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವೀಟರ್ ಜನಪ್ರಿಯತೆ ಹೆಚ್ಚಾಗಿತ್ತು. ಈ ಬಗ್ಗೆ ಕೇಂದ್ರ ಸಚಿವ ಸ್ಮೃತಿ ಇರಾನಿ ಮಾಡಿದ್ದ ಟ್ವೀಟ್ ವೊಂದು ಅವರ ಮತ್ತು ಕಾಂಗ್ರೆಸ್ ನಾಯಕಿ ರಮ್ಯಾ ನಡುವಿನ ಟ್ವೀಟ್ ಯುದ್ಧಕ್ಕೆ ಕಾರಣವಾಗಿತ್ತು. ರಾಹುಲ್ ಗಾಂಧಿ ಟ್ವಿಟರ್ ಜನಪ್ರಿಯತೆಗೆ ರಷ್ಯಾ ಮೂಲದ ಸಂಸ್ಥೆ ಕಾರಣ ಎಂದು ಸ್ಮೃತಿ ಇರಾನಿ ಆರೋಪಿಸಿದ್ದು, ರಷ್ಯಾ ಮೂಲದ ಬಾಟ್ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ನಿರ್ವಹಿಸುತ್ತಿದ್ದು, ರಾಹುಲ್ ಗಾಂಧಿ ಅವರ ಪ್ರತಿಯೊಂದು ಟ್ವೀಟ್ ಗಳನ್ನು ರಷ್ಯಾ ಮೂಲದ ಸಂಸ್ಥೆ ನಿಯಂತ್ರಿಸುತ್ತಿದೆ ಎಂದು ಆರೋಪಿಸಿದ್ದರು, ಇದಕ್ಕೆ ತಿರುಗೇಟು ನೀಡಿದ್ದ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನದ ನೇತೃತ್ವ ವಹಿಸಿಕೊಂಡಿರುವ ನಟಿ ರಮ್ಯಾ, ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ಟ್ವಿಟರ್ ಖಾತೆಯನ್ನು ತಂತ್ರಾಂಶಗಳ ಮೂಲಕ ನಿಯಂತ್ರಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. ರಾಹುಲ್ ಗಾಂಧಿ ಟ್ವಿಟರ್ ಗೆ ಬಂದಿರುವ ಸುಮಾರು 54 ಸಾವಿರ ಪ್ರಿತಿಕ್ರಿಯೆಗಳಲ್ಲಿ ಪತ್ರಕರ್ತೆಯ ಟ್ವೀಟ್ ಅನ್ನು ಮಾತ್ರ ಸ್ಮೃತಿ ಇರಾನಿ ಅದು ಹೇಗೆ ಹೆಕ್ಕಿ ತೆಗೆದರೋ ತಿಳಿಯುತ್ತಿಲ್ಲ. ಅಂತೆಯೇ ರಾಹುಲ್ ವಿರುದ್ಧ ಆರೋಪ ಮಾಡಿ ವರದಿ ಪ್ರಕಟಿಸಿರುವ ಪತ್ರಕರ್ತೆ ಅದಾವ ಮೂಲದಿಂದ ಇಂತಹ ವಿಷಯ ತಿಳಿದರೋ ತಿಳಿಯುತ್ತಿಲ್ಲ ಎಂದು ಟಾಂಗ್ ನೀಡಿದ್ದರು. ಇವರಿಬ್ಬರ ಈ ಟ್ವೀಟ್ ವಾರ್ ವ್ಯಾಪಕ ವೈರಲ್ ಆಗಿತ್ತು.
ಗುಜರಾತ್ ಚುನಾವಣೆ ವೇಳೆ ವೈರಲ್ ಆಗಿದ್ದ ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ
ಗುಜರಾತ್ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದು ಹೇಳಲಾಗುತ್ತಿದ್ದ ಪಾಟಿದಾರ್ ಹೋರಾಟದ ಪ್ರಮುಖ ನಾಯಕ ಹಾರ್ದಿಕ್ ಪಟೇಲ್ ಗೆ ಸಂಬಂಧಿಸಿದ ಸೆಕ್ಸ್ ಸಿಡಿಯೊಂದು ಬಹಿರಂಗವಾಗಿತ್ತು. ಗುಜರಾತ್ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಹೊತ್ತಲ್ಲಿ ಈ ವಿಡಿಯೋ ಬಹಿರಂಗವಾದ್ದರಿಂದ ಪಾಟಿದಾರ್ ಚಳುವಳಿಗೆ ಹಿನ್ನಡೆಯಾಗಬಹುದು ಎಂದು ಎಣಿಸಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಹಾರ್ದಿಕ್ ಪಟೇಲ್, ಈ ಸಿಡಿಯಲ್ಲಿರುವುದು ನಾನಲ್ಲ. ಅದು ನಕಲಿ ಸಿಡಿ. ಪಟೇಲ್ ಮೀಸಲಾತಿ ಹೋರಾಟದ ಹೊಡೆತ ತಾಳಲಾರದೇ ಬಿಜೆಪಿಯವರೇ ನಕಲಿ ಸಿಡಿ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಟ್ವಿಟರ್ ನಲ್ಲೂ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಇಂತಹ ನೀಚ ರಾಜಕಾರಣ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಕಿಡಿಕಾರಿದ್ದರು.
ಕನ್ನಡ ರಾಜ್ಯೋತ್ಸವ: ಪುನೀತ್ ಹಾಡಿದ ಅಣ್ಣಾವ್ರ ಹಾಡು ವೈರಲ್
ಕನ್ನಡ ರಾಜ್ಯೋತ್ಸವ ದಿನದಂದ ನಟ ಪುನೀತ್ ರಾಜ್ ಕುಮಾರ್ ಹಾಡಿದ್ದ ಹಾಡೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಡಾ. ರಾಜ್ ಅಭಿನಯದ 'ಚಲಿಸುವ ಮೋಡಗಳು' ಚಿತ್ರದ "ಜೇನಿನ ಹೊಳೆಯೊ ಹಾಲಿನ ಮಳೆಯೊ..." ಹಾಡನ್ನು ಹಾಡಿದ್ದ ಪುನೀತ್ ವೀಡಿಯೋವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದರು. ಈ ವಿಡಿಯೋಗೆ ವ್ಯಾಪಕ ಪ್ರಶಂಸೆ ಕೂಡ ವ್ಯಕ್ತವಾಗಿತ್ತು.
ಮಕ್ಕಳನ್ನು ಶಾಲೆಗ ಕಳುಹಿಸಿ ಇಲ್ಲ..ಜೈಲಿನಲ್ಲಿ ಮುದ್ದೆ ಮುರಿಯಿರಿ ಎಂದಿದ್ದ ಉತ್ತರ ಪ್ರದೇಶ ಸಚಿವ
ಮಕ್ಕಳನ್ನು ಶಾಲೆಗೆ ಕಳುಹಿಸದ ಮಕ್ಕಳನ್ನು ಜೈಲಿಗೆ ಹಾಕಿ ಮುದ್ದೆ ಮುರಿಯುವಂತೆ ಮಾಡುತ್ತೇನೆ ಎಂದು ಉತ್ತರ ಪ್ರದೇಶ ಸಚಿವ ಓಂಪ್ರಕಾಶ್ ರಾಜ್ ಭರ್ ಪೋಷಕರಿಗೆ ಎಚ್ಚರಿಕೆ ನೀಡಿದ್ದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ನಾನು ನನ್ನ ಆಯ್ಕೆಯ ನಿಯಮವೊಂದನ್ನು ಜಾರಿಗೊಳಿಸಲಿದ್ದೇನೆ. ಬಡವರ ಮಕ್ಕಳು ಶಾಲೆಗೆ ಹೋಗದಿದ್ದರೆ ಅವರ ಪೋಷಕರನ್ನು ಐದು ದಿನ ಜೈಲಿನಲ್ಲಿ ಬಂಧಿಸಿಡಲಾಗುತ್ತದೆ. ಅವರಿಗೆ ಅನ್ನ, ಆಹಾರ ನೀಡುವುದಿಲ್ಲ. ಇದುವರೆಗೆ ನಿಮ್ಮ ನಾಯಕ, ಮಗ, ಅಣ್ಣ ನಿಮಗೆ ಅರ್ಥ ಮಾಡಿಸಲು ಪ್ರಯತ್ನಿಸಿದ್ದರು. ಆದರೂ ನಿಮಗೆ ಅರ್ಥವಾಗಿಲ್ಲ ಎಂದಾದರೆ ಇನ್ನೂ ಆರು ತಿಂಗಳು ನಿಮಗೆ ಕಲಿಸಲು ಪ್ರಯತ್ನಿಸುತ್ತೇನೆ" ಎಂದು ನೇರವಾಗಿ ಪೋಷಕರಿಗೆ ಎಚ್ಚರಿಗೆ ನೀಡಿದ್ದರು. ಈ ಸುದ್ದಿ ವ್ಯಾಪಕ ವೈರಲ್ ಆಗಿತ್ತು.
ಸದ್ದು ಮಾಡಿದ್ದ ಫೇಕ್ ಸಚಿನ್ ಟ್ವೀಟ್: ವೈರಲ್
ನಟಿ ಅನುಷ್ಕಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿವಾಹ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ವಿರಾಟ್ ಕೊಹ್ಲಿಗೆ ರಾತ್ರಿ ವೇಳೆ ಹೆಲ್ಮೆಟ್ ಧರಿಸುವಂತೆ ಫೇಕ್ ಸಚಿನ್ ಖಾತೆದಾರ ಸಲಹೆ ನೀಡಿದ್ದ ವಿಚಾರ ಟ್ವಿಟರ್ ನಲ್ಲಿ ವ್ಯಾಪಕ ವೈರಲ್ ಆಗಿತ್ತು. ಆದರೆ ಈ ಫೇಕ್ ಸಚಿನ್ ಟ್ವೀಟ್ ಅವರ ಅಭಿಮಾನಿಗಳಿಗೆ ಗೊಂದಲ ಮೂಡಿಸಿತ್ತು. ಈ ಟ್ವೀಟ್ ಫೋಟೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಇದು ನಕಲಿ ಎಂದು ಅರಿಯದೆ ಹಲವಾರು ನೆಟಿಜನ್‍ಗಳು ಇದನ್ನು ಶೇರ್ ಮಾಡುತ್ತಿದ್ದರು. ಆದರೆ ಇದು ನಕಲಿ ಖಾತೆಯಾಗಿದ್ದು, ಸಚಿನ್ ಅವರು @sachin_rt ಎಂಬ ಅಧಿಕೃತ ಖಾತೆಯನ್ನು ಹೊಂದಿದ್ದು, @MasterBlaster ಖಾತೆ ನಕಲಿ ಖಾತೆಯಾಗಿದೆ. ನವ ವಿವಾಹಿತ ಕೊಹ್ಲಿ ಮತ್ತು ಅನುಷ್ಕಾ ದಂಪತಿಗೆ ಸಚಿನ್ ಹರಿಸಿರುವ ಟ್ವೀಟ್ ಇಲ್ಲಿದ್ದು, ನವ ವಿವಾಹಿತ ಅನುಷ್ಕಾ-ಕೊಹ್ಲಿಗೆ ಶುಭ ಹಾರೈಕೆಗಳು, ಇಬ್ಬರು ಒಟ್ಟಾಗಿ ಅದ್ಬುತವಾಗಿ ಕಾಣುತ್ತಿದ್ದೀರಿ ಎಂದು ಸಚಿನ್ ಟ್ವೀಟ್ ಮಾಡಿದ್ದರು.