ದೇಶ

ಅಗ್ನಿ ದುರಂತ ಬಳಿಕ ರೆಸ್ಟೋರೆಂಟ್ ಕಟ್ಟಡದ ಅಕ್ರಮ ಭಾಗ ನೆಲಸಮ ಮಾಡಿದ ಮುಂಬೈ ಮಹಾನಗರ ಪಾಲಿಕೆ!

Srinivasamurthy VN
ಮುಂಬೈ: 14 ಜನರ ಸಾವಿಗೆ ಕಾರಣವಾದ ಮುಂಬೈನ ಕಮಲಾ ಮಿಲ್ಸ್ ಕಾಪೌಂಡ್ ನಲ್ಲಿರುವ ರೂಫ್ ಟಾಪ್ ಪಬ್ ಅಗ್ನಿ ದುರಂತದ ಬೆನ್ನಲ್ಲೇ ಮುಂಬೈ ಮಹಾನಗರ ಪಾಲಿಕೆ ಅಲ್ಲಿನ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ  ಆರಂಭಿಸಿದೆ.
ದುರಂತ ನಡೆದ ರೆಸ್ಟೋರೆಂಟ್ ಕೂಡ ಸೇರಿದಂತೆ ಆ ಪ್ರದೇಶದಲ್ಲಿರುವ ಸುಮಾರು 10ಕ್ಕೂ ಹೆಚ್ಚು ಕಟ್ಟಡಗಳ ಅಕ್ರಮ ಭಾಗಗಳನ್ನು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸುತ್ತಿದ್ದಾರೆ. ಕೇವಲ  ಕಮಲಾ ಮಿಲ್ಸ್ ಮಾತ್ರವಲ್ಲದೇ ಪಕ್ಕದ ರಾಘವೇಂದ್ರ ಮಿಲ್ಸ್ ಕಾಂಪೌಂಡ್ ನಲ್ಲಿರುವ ಅಕ್ರಮ ಕಟ್ಟಡಗಳನ್ನೂ ಕೂಡ ಬಿಎಂಸಿ ಅಧಿಕಾರಿಗಳು ನೆಲಸಮಗೊಳಿಸುತ್ತಿದ್ದಾರೆ. ಅಚ್ಚರಿ ಎಂದರೆ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ  ವೇಳೆ ಅಧಿಕಾರಿಗಳು ವಿವಾದಿತ ಸ್ಥಳದಲ್ಲಿರುವ ಗಿಡಗಳ ಪಾಟ್ ಗಳನ್ನೂ ಕೂಡ ಹೊಡೆದು ಹಾಕುತ್ತಿದ್ದಾರೆ. 
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಎಂಸಿ ಅಧಿಕಾರಿ ಅಜೋಯ್ ಮೆಹ್ತಾ, ಪ್ರತೀ ವಾರ್ಡ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಅಕ್ರಮ ಕಟ್ಟಡ ಮಾಹಿತಿ ಮತ್ತು ಅಕ್ರಮ ತೆರವು ಕಾರ್ಯಾಚರಣೆ ನಡೆಸುವಂತೆ  ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಅಗ್ನಿ ದುರಂತ ಎಲ್ಲ ಆರೋಪಿಗಳಿಗೂ ಲುಕ್ ಔಟ್ ನೋಟಿಸ್ ಜಾರಿ
ಇನ್ನು ನಿನ್ನೆ ಸಂಭವಿಸಿದ ಅಗ್ನಿ ದುರಂತ ಸಂಬಂಧ ಪ್ರಸ್ತುತ ಬಂಧನಕ್ಕೀಡಾಗಿರುವ ರೆಸ್ಟೋರೆಂಟ್ ಮಾಲೀಕರೂ ಸೇರಿದಂತೆ ಎಲ್ಲ ಆರೋಪಿಗಳಿಗೂ ಅಧಿಕಾರಿಗಳು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ ಎಂದು  ತಿಳಿದುಬಂದಿದೆ.
SCROLL FOR NEXT