ನವದೆಹಲಿ: ತ್ರಿವರ್ಣ ಧ್ವಜದ ಮಾದರಿಯ ಡೋರ್ ಮ್ಯಾಟ್ ನ್ನು ಮಾರಾಟ ಮಾಡುತ್ತಿದ್ದ ಇ-ಕಾಮರ್ಸ್ ವೆಬ್ ಸೈಟ್ ಅಮೇಜಾನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
ಅಮೇಜಾನ್ ತ್ರಿವರ್ಣ ಧ್ವಜ ಮಾದರಿಯ ಡೋರ್ ಮ್ಯಾಟ್ ನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಜೆಟ್ ಅಧಿವೇಶನದ ಫೆ.2 ರ ರಾಜ್ಯಸಭಾ ಕಲಾಪದಲ್ಲಿ ಚರ್ಚೆ ನಡೆಯಿತು. ರಾಷ್ಟ್ರೀಯ ಚಿನ್ಹೆಗಳನ್ನು ಹೊಂದಿರುವ ಈ ರೀತಿಯ ಉತ್ಪನ್ನಗಳ ಮಾರಾಟಕ್ಕೆ ನಿಷೇಧ ವಿಧಿಸಲು ಸಾಧ್ಯವಿಲ್ಲವೇ ಎಂಬ ಸದನದ ಪ್ರಶ್ನೆಗೆ ಉತ್ತರಿಸಿರುವ ವಿದೇಶಾಂಗ ರಾಜ್ಯ ಸಚಿವ ಎಂಜೆ ಅಕ್ಬರ್, ಈ ರೀತಿಯ ನಿಷೇಧ ವಿಧಿಸುವುದಕ್ಕೆ ಪೂರಕವಾಗಿ ಯಾವುದೇ ಅಂತಾರಾಷ್ಟ್ರೀಯ ಒಪ್ಪಂದಗಳಿಲ್ಲ. ಆದರೆ ರಾಷ್ಟ್ರೀಯ ಚಿನ್ಹೆಗಳಿಗೆ ಅವಮಾನ ಉಂಟುಮಾಡುವುದನ್ನು ತಡೆಗಟ್ಟಲು 1950 ಹಾಗೂ 1971 ರಲ್ಲಿ ಜಾರಿಗೆ ತರಲಾಗಿರುವ ಕಾಯ್ದೆಗಳ ಮೂಲಕ ಸಾಧ್ಯವಿದೆ ಎಂದು ಹೇಳಿದ್ದಾರೆ.
ತ್ರಿವರ್ಣ ಧ್ವಜದ ಮಾದರಿಯ ಡೋರ್ ಮ್ಯಾಟ್ ನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡುತ್ತಿದ್ದ ಘಟನೆ ಅಮೆರಿಕ ಹಾಗೂ ಕೆನಡಾಗಳಲ್ಲಿ ವರದಿಯಾಗಿದೆ. ತಕ್ಷಣವೇ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಸಂಬಂಧಿಸಿದವರನ್ನು ಸಂಪರ್ಕಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಮೇಜಾನ್ ನ ಮಾಲಿಕನ ಗಮನಕ್ಕೂ ಈ ವಿಷಯವನ್ನು ತರಲಾಗಿದ್ದು, ಅಮೇಜಾನ್ ಸಂಸ್ಥೆ ಕ್ಷಮೆ ಕೋರಿ ಭಾರತ ಸರ್ಕಾರಕ್ಕೂ ಪತ್ರ ಬರೆದಿದೆ, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಚಿನ್ಹೆಗಳಿಗೆ ಅವಮಾನ ಉಂಟಾಗುವಂತಹ ಘಟನೆಗಳು ಇನ್ನು ಮುಂದೆ ನಡೆಯುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಎಂಜೆ ಅಕ್ಬರ್ ಸದನಕ್ಕೆ ತಿಳಿಸಿದ್ದಾರೆ.