ದೇಶ

ಕಳಪೆ ಆಹಾರ ವಿಡಿಯೋ ಪ್ರಕರಣ: ಬಿಎಸ್ ಎಫ್ ಯೋಧ ತೇಜ್ ಬಹದ್ದೂರ್ ಬಂಧನ?

Shilpa D

ನವದೆಹಲಿ: ಸೈನಿಕರಿಗೆ ಕಳಪೆ ಮಟ್ಟದ ಆಹಾರ ನೀಡಲಾಗುತ್ತಿದೆ ಎಂಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದ ಬಿಎಸ್​ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ಬಂಧಿಸಲಾಗಿದೆ ಎಂದು ಅವರ ಪತ್ನಿ ಆರೋಪಿಸಿದ್ದಾರೆ.

ನನ್ನ ಪತಿ ಜನವರಿ 31 ರಂದು ಮನೆಗೆ ಬರಬೇಕಿತ್ತು, ಆದರೆ ಇದುವರೆಗೂ ಬಂದಿಲ್ಲ ಎಂದು ಯಾದವ್ ಪತ್ನಿ ಶರ್ಮಿಳಾ ದೂರಿದ್ದಾರೆ. ನನ್ನ ಪತಿಗೆ ನಿವೃತ್ತಿಯಾಗುವಂತೆ ಒತ್ತಡ ಹೇರಲಾಗುತ್ತಿದೆ. ಅಲ್ಲದೆ ಅವರನ್ನು ಬಂಧನದಲ್ಲಿಡಲಾಗಿದೆ ಎಂದು ಅವರು ಆಪಾದಿಸಿದ್ದಾರೆ.

ಬಿಎಸ್ ಎಫ್ ನ 29ನೇ ಬೆಟಾಲಿಯನ್ ನಲ್ಲಿ ನನ್ನ ಪತಿ ಕೆಲಸ ಮಾಡುತ್ತಿದ್ದರು. ಇಂದು ನನಗೆ ಬೇರೊಬ್ಬರ ಫೋನಿನಿಂದ ಕೆರ ಮಾಡಿ ನನ್ನನ್ನು ಬಂಧಿಸಲಾಗಿದೆ, ನನಗೆ ಮಾನಸಿಕವಾಗಿ ಕಿರುಕುಳ ನೀಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ತೇಜ್ ಬಹದ್ದೂರ್ ಹೇಳಿದ್ದಾಗಿ ಶರ್ಮಿಳಾ ಯಾದವ್ ತಿಳಿಸಿದ್ದಾರೆ.

ಮೊದಲು ಕರೆ ಮಾಡಿ ನನ್ನನ್ನು ನಿವೃತ್ತಿಯಾಗುವಂತೆ ಬಲವಂತ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಮತ್ತೆ 1 ಗಂಟೆ ನಂತರ ನಿವೃತ್ತಿಯನ್ನು ರದ್ದು ಮಾಡಿ ಅವರನ್ನು ಬಂಧಿಸಿದ್ದಾರೆ ಎಂದು ಶರ್ಮಿಳಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ತೇಜ್ ಬಹದ್ದೂರ್ ಅವರನ್ನು ಬಂಧಿಸಿಲ್ಲ, ಅವರು ಮಾಡಿರುವ ಆಪಾದನೆಗಳ ಕುರಿತು ವಿಚಾರಣೆ ಪ್ರಗತಿಯಲ್ಲಿದೆ. ಅದು ಮುಗಿಯುವವರೆಗು ಅವರನ್ನು ಒಳಗೊಂಡಂತೆ ಈ ಸಂಬಂಧ ವಿಚರಾಣೆ ಎದುರಿಸುತ್ತಿರುವ ಯಾರೊಬ್ಬರು ನಿವೃತ್ತಿ ಹೊಂದುವಂತಿಲ್ಲ. ಅಲ್ಲದೆ ಅವರ ವಿರುದ್ಧ ಕೆಲವು ಶಿಸ್ತು ಉಲ್ಲಂಘನೆ ದೂರುಗಳು ಇವೆ ಎಂದು ಬಿಎಸ್ ಎಫ್ ಅಧಿಕಾರಿಗಳು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

SCROLL FOR NEXT