ನವದೆಹಲಿ: ಜಮಾತ್-ಉದ್-ದಾವಾ(ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ನ ಗೃಹ ಬಂಧನದಿಂದ ಪ್ರಸ್ತುತ ಸ್ಥಿತಿಯಲ್ಲಿ ಪಾಕಿಸ್ತಾನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ರಕ್ಷಣಾ ತಜ್ಞ ಬ್ರಿಗೇಡಿಯರ್ (ನಿವೃತ್ತ) ಎಸ್.ಕೆ.ಚಟರ್ಜಿ ಹೇಳಿದ್ದಾರೆ.
ಸಯೀದ್ ಮತ್ತು ಆತನ ನಾಲ್ಕೈದು ಮಂದಿ ಸಹಚರರ ಗೃಹ ಬಂಧನದಿಂದ ಪಾಕಿಸ್ತಾನದ ಮೇಲೆ ಒತ್ತಡವಿದೆ ಎಂಬುದು ಗೊತ್ತಾಗುತ್ತದೆ. ಪಾಕಿಸ್ತಾನದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಹಫೀಜ್ ಸಯೀದ್ ನನ್ನು ಕಳುಹಿಸುವುದು ಉತ್ತಮ ಎಂದು ಪಾಕಿಸ್ತಾನ ಆಂತರಿಕ ಸಚಿವಾಲಯ ಕೂಡ ಹೇಳಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ರಕ್ಷಣಾ ತಜ್ಞ ಅಶೋಕ್ ಕುಮಾರ್ ಬೆಹುರಿಯಾ, ಇದು ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಡಲು ಗಂಭೀರವಾಗಿ ಯತ್ನಿಸುತ್ತಿದೆ ಎಂದು ಭಾರತ ಸೇರಿದಂತೆ ವಿಶ್ವಕ್ಕೆ ನೀಡುತ್ತಿರುವ ಸೂಚನೆಯಾಗಿದೆ. ಈ ನಿಟ್ಟಿನಲ್ಲಿ ಇದು ದಿಟ್ಟ ಕ್ರಮ ಎಂದು ಬೆಹುರಿಯಾ ಎಎನ್ ಐ ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಇಂತಹ ಕ್ರಮಗಳನ್ನು ಈ ಹಿಂದೆ ಕೂಡ ತೆಗೆದುಕೊಳ್ಳಲಾಗಿತ್ತು. ಉಗ್ರಗಾಮಿ ಪಡೆಗಳನ್ನು ನಿಷೇಧಿಸಲಾಗಿತ್ತು. ನಂತರ ಬೇರೆ ಹೆಸರಿನಲ್ಲಿ ಬರಲು ಅವಕಾಶ ನೀಡಲಾಯಿತು. ನಂತರ ಪುನಃ ಬಂಧಿಸಲಾಯಿತು. ಮತ್ತೆ ಬಿಡುಗಡೆ ಮಾಡಿ ಭಾರತದ ವಿರುದ್ಧ ಸಂಚು ರೂಪಿಸಲು ಬಿಡಲಾಯಿತು ಎಂದು ಅವರು ಹೇಳುತ್ತಾರೆ.
ಪಾಕಿಸ್ತಾನದ ಆಂತರಿಕ ಸಚಿವಾಲಯ ಹಫೀಜ್ ಸಯೀದ್ ಮತ್ತು ಇತರ 37 ಮಂದಿ ಜೆಯುಡಿ ಅಥವಾ ಲಷ್ಕರ್ ಇ ತಯ್ಬಾ ಗುಂಪಿಗೆ ಸೇರಿದವರ ಹೆಸರನ್ನು ನಿರ್ಗಮ ನಿಯಂತ್ರಣ ಪಟ್ಟಿಗೆ ಸೇರಿಸಿದೆ.
ಅಲ್ಲದೆ ಎಲ್ಲಾ ಪ್ರಾಂತೀಯ ಸರ್ಕಾರ ಮತ್ತು ಫೆಡರಲ್ ತನಿಖಾ ಸಂಸ್ಥೆಗೆ ಪತ್ರ ಕಳುಹಿಸಿದೆ.
ಹಫೀಜ್ ಸಯೀದ್ ನನ್ನು ಗೃಹ ಬಂಧನದಲ್ಲಿರಿಸಿ ಎರಡು ದಿನಗಳ ನಂತರ 38 ಮಂದಿಗೆ ಪಾಕಿಸ್ತಾನ ಬಿಟ್ಟು ಹೋಗದಂತೆ ನಿರ್ಬಂಧ ವಿಧಿಸಲಾಗಿದೆ.