ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಪಂಜಾಬ್ ಹಾಗೂ ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಗಳು ಶನಿವಾರದಿಂದ ಆರಂಭಗೊಂಡಿದೆ.
ಪಂಜಾಬ್ ರಾಜ್ಯದಲ್ಲಿ 117 ಮತ್ತು ಗೋವಾದಲ್ಲಿ 40 ಸ್ಥಾನಗಳಿಗೆ ಏಕಹಂತದಲ್ಲಿ ಚುನಾವಣೆ ನಡೆಯಲಿದೆ. ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಅಧಿಕಾರಿಗಳು ಎರಡೂ ರಾಜ್ಯಗಳಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಿದೆ. ಈ ಮೂಲಕ ಸಾಕಷ್ಟು ಭದ್ರತೆಯೊಂದಿಗೆ ಮತದಾನ ಪ್ರಕ್ರಿಯೆಗಳು ಇಂದು ಬೆಳಿಗ್ಗೆಯಿಂದ ಆರಂಭಗೊಂಡಿವೆ. ಗೋವಾ ರಾಜ್ಯದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಹಾಗೂ ಪಂಜಾಬ್ ರಾಜ್ಯದ ಹಲವೆಡೆ ಬೆಳಿಗ್ಗೆ 8 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡಿವೆ. ಸಂಜೆ 5 ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ.
ಗೋವಾ ರಾಜ್ಯದಲ್ಲಿ 11 ಲಕ್ಷ ಜನರು ಇಂದು ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದು, 1,642 ಮತಗಟ್ಟೆಗಳನ್ನು ತೆರೆಯಲಾಗಿದೆ. ಜಾಬ್ ರಾಜ್ಯದಲ್ಲಿ 1.98 ಮತದಾರರು ಮತದಾನ ಮಾಡಲಿದ್ದು, 81 ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ಸೇರಿದಂತೆ 1,145 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಚುನಾವಣೆ ಆರಂಭವಾಗಿರುವ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 7.20ರ ಸುಮಾರಿಗೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ಇನ್ನಿತರೆ ನಾಯಕರು ಸಾಮಾನ್ಯ ಜನರಂತೆಯೇ ಸಾಲಿನಲ್ಲಿ ನಿಂತು ಪಣಜಿಯ ಹಾರ್ಟ್ ಸಿಟಿಯಲ್ಲಿದ್ದ ಮತಗಟ್ಟೆಗೆ ಹೋಗಿ ತಮ್ಮ ಮತವನ್ನು ಹಾಕಿದ್ದಾರೆ.
ಪಂಜಾಬ್ ನಲ್ಲಿ ಬಿಜೆಪಿ-ಅಕಾಲಿದಳ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಪಕ್ಷಗಳ ನಡುವೆ ತ್ರಿಕೋನ ಸಮರ ಏರ್ಪಡಲಿದೆ. ಜಾಬ್ ನಲ್ಲಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಉಪ ಮುಖ್ಯಮಂತ್ರಿ ಸುಖಬೀರ್ ಬಾದಲ್, ಕಾಂಗ್ರೆಸ್ ನ ಅಮರೀಂದರ್ ಸಿಂಗ್, ನವಜೋತ್ ಸಿಂಗ್ ಹಾಗೂ ಆಮ್ ಆದ್ಮಿ ಪಕ್ಷದಲ್ಲಿ ಭಗವಂತ ಮಾನ್ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಇದರಂತೆ ಗೋವಾದಲ್ಲಿಯೂ ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಎಂಜಿಪಿ ಮತ್ತು ಇತರರ ನಡುವೆ ಬಹುಕೋನ ಸ್ಪರ್ಧೆ ಇದೆ.