ನವದೆಹಲಿ: ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ವಿ.ಕೆ.ಶಶಿಕಲಾ ಅವರ ನೇಮಕಾತಿಗೆ ಸಂಬಂಧಪಟ್ಟಂತೆ ನಡೆದ ಚುನಾವಣೆ ಖಂಡಿಸಿ ಪಕ್ಷದಿಂದ ವಜಾಗೊಂಡ ನಾಯಕಿ ಶಶಿಕಲಾ ಪುಷ್ಪ ಅವರು ದಾಖಲಿಸಿದ್ದ ದೂರಿಗೆ ಸಂಬಂಧಪಟ್ಟಂತೆ ಚುನಾವಣಾ ಆಯೋಗ ಎಐಎಡಿಎಂಕೆಯ ಪ್ರತಿಕ್ರಿಯೆ ಕೇಳಿದೆ.
ಕ್ರಮಬದ್ಧವಾಗಿ ಚುನಾವಣೆಯನ್ನು ನಡೆಸಲಿಲ್ಲ ಎಂದು ಶಶಿಕಲಾ ಪುಷ್ಪ ದೂರು ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಈ ಬಗ್ಗೆ ಪಕ್ಷದಿಂದ ಪ್ರತಿಕ್ರಿಯೆ ಕೇಳಲಾಗಿದೆ. ನೊಟೀಸ್ ಜಾರಿಯಲ್ಲದ್ದರಿಂದ ಕಾಲಾವಧಿ ನಿಗದಿಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಶಶಿಕಲಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪ್ರಜಾಪ್ರಭುತ್ವವಲ್ಲದ ರೀತಿಯಲ್ಲಿ ನಡೆಸಲಾಗಿದೆ ಎಂದು ಶಶಿಕಲಾ ಪುಷ್ಪ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ವಿ.ಕೆ.ಶಶಿಕಲಾ 1980ರಿಂದ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಅತ್ಯಂತ ನಿಕಟವರ್ತಿಯಾಗಿದ್ದರು. ಜಯಲಲಿತಾ ಅವರ ನಿಧನಕ್ಕೆ ಮುನ್ನ ಯಾವುದೇ ಸ್ಥಾನವನ್ನು ಅಧಿಕೃತವಾಗಿ ಹೊಂದಿಲ್ಲದಿದ್ದರೂ ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು.