ದೇಶ

ಎರಡೂವರೆ ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಡೆಪಾಸಿಟ್ ಮಾಡಿದವರ ವಿರುದ್ಧ ವಿಚಾರಣೆ

Shilpa D

ನವದೆಹಲಿ: ನೋಟು ನಿಷೇಧ ತೀರ್ಮಾನದ ನಂತರ ಬ್ಯಾಂಕ್‌ ಖಾತೆಗಳಲ್ಲಿ ರು.2.5 ಲಕ್ಷಕ್ಕಿಂತ ಹೆಚ್ಚು ಹಣ ಜಮಾ ಮಾಡಿದವರನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಜಮಾ ಮಾಡಿದ ಮೊತ್ತವು ವ್ಯಕ್ತಿಯ ಆದಾಯ ತೆರಿಗೆ ಲೆಕ್ಕಪತ್ರದ ಜೊತೆ ಹೊಂದಾಣಿಕೆಯಾಗಿದಿದ್ದರೇ ಅಂಥ ವ್ಯಕ್ತಿಗಳನ್ನೂ ವಿಚಾರಣೆಗೆ ಒಳಪಡಿಸಲಾಗುವುದು. ದತ್ತಾಂಶ ವಿಶ್ಲೇಷಣೆ ಮೂಲಕ ಇಲಾಖೆಯು, ವಿವಿಧ ಮೊತ್ತದ ಹಣ ಜಮೆ ಮಾಡಿದವರ ವಿವರ ಪರಿಶೀಲಿಸಿದೆ. ಹಿಂದಿನ ವರ್ಷದಲ್ಲಿ ವ್ಯಕ್ತಿ ಸಲ್ಲಿಸಿದ್ದ ಆದಾಯ ತೆರಿಗೆ ಲೆಕ್ಕ ಹಾಗೂ ಜಮಾ ಮೊತ್ತದ ನಡುವೆ ತಾಳೆ ಆಗದಿದ್ದರೆ, ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದೆ.

ನ್ಯಾಯಯುತವಾಗಿ ವಹಿವಾಟು ನಡೆಸಿದವರಿಗೆ ಕಿರುಕುಳ ಎದುರಾಗದಂತೆ ನೋಡಿಕೊಳ್ಳುತ್ತೇವೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಸುಶೀಲ್‌ ಚಂದ್ರ ತಿಳಿಸಿದ್ದಾರೆ. 2.5 ಲಕ್ಷದವರೆಗೆ ಹಣ ಜಮಾ ಮಾಡಿದವರನ್ನು ಪ್ರಶ್ನಿಸುವುದಿಲ್ಲ ಎಂದು ಪ್ರಧಾನಿಯವರೇ ಹೇಳಿದ್ದಾರೆ. ಹಾಗಾಗಿ ನಾವು ಆ ಮೊತ್ತದವರೆಗೆ ಹಣ ಜಮಾ ಮಾಡಿದವರ ಮಾಹಿತಿಯನ್ನು ಪ್ರತ್ಯೇಕವಾಗಿ ಇರಿಸಿದ್ದೇವೆ ಎಂದು ಹೇಳಿದರು.

ವ್ಯಕ್ತಿಯೊಬ್ಬ ಪ್ರತಿ ವರ್ಷ ರು. 10 ಲಕ್ಷ ಸಂಪಾದಿಸಿ, ಅದಕ್ಕೆ ತೆರಿಗೆ ಪಾವತಿಸುತ್ತಿದ್ದರೆ, ಆ ವ್ಯಕ್ತಿ ಮಾಡಿದ ರು. 3 ಲಕ್ಷದವರೆಗಿನ ಜಮೆಯನ್ನು ಇಲಾಖೆ ಪ್ರಶ್ನಿಸುವುದಿಲ್ಲ. ಕಂಪೆನಿಗಳು ಆದಾಯ ಮತ್ತು ಖರ್ಚಿನ ವಿವರದಲ್ಲಿ ತಮ್ಮ ಬಳಿ ರು. 10 ಲಕ್ಷ ನಗದು ಇದೆ ಎಂದು ಹೇಳಿಕೊಂಡು, ಅದರಲ್ಲಿ 5 ಲಕ್ಷ ಜಮಾ ಮಾಡಿದ್ದರೆ, ಅವು ಇಲಾಖೆಯಿಂದ ವಿಚಾರಣೆ ಎದುರಿಸಬೇಕಿಲ್ಲ ಎಂದು ತಿಳಿಸಿದ್ದಾರೆ.

ವ್ಯಕ್ತಿಯೊಬ್ಬ ಸತತವಾಗಿ ಮೂರು ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸದೆ, ನೋಟು ರದ್ದತಿ ನಂತರ ರು. 5 ಲಕ್ಷ ಜಮಾ ಮಾಡಿದ್ದರೆ ಅಂಥವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ರು.  2.5 ಲಕ್ಷಕ್ಕೆ ಆದಾಯ ತೆರಿಗೆ ಲೆಕ್ಕ ಸಲ್ಲಿಸಿ, ಬೇರೆ ಬೇರೆ ಬ್ಯಾಂಕ್‌ ಖಾತೆಗಳಲ್ಲಿ ಒಟ್ಟು ರು 10 ಲಕ್ಷ ಜಮಾ ಮಾಡಿದ್ದರೆ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

SCROLL FOR NEXT