ನವದೆಹಲಿ: ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಕುರಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆ ಅರ್ಥಹೀನ ಹಾಗೂ ನಾಚಿಕೆಗೇಡಿತನವಾದದ್ದು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವರು ಗುರುವಾರ ಹೇಳಿದ್ದಾರೆ.
ಮೋದಿಯವರ ರೇನ್ ಕೋಟ್ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಹಿರಿಯ ಹಾಗೂ ಉನ್ನತ ರಾಜಕಾರಣಿಯಾಗಿರುವ ಮನಮೋಹನ್ ಸಿಂಗ್ ಅವರ ಬಗ್ಗೆ ಮೋದಿಯವರು ಈ ರೀತಿಯಾಗಿ ಹೇಳಿಕೆ ನೀಡುತ್ತಿರುವುದು ಹಾಗೂ ಹೇಳಿಕೆಯನ್ನು ಹಿರಿಯ ನಾಯಕರು ಸಹಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಾಗಿದೆ. ರೇನ್ ಕೋಟ್ ಹಾಕಿಕೊಂಡು ಸ್ನಾನ ಮಾಡುವ ಕಲೆಯನ್ನು ಮನಮೋಹನ್ ಸಿಂಗ್ ಅವರಿಂದ ಕಲಿಯಬೇಕೆಂಬ ಹೇಳಿಕೆ ಅರ್ಥಹೀನವಾದದ್ದು ಎಂದು ಹೇಳಿದ್ದಾರೆ.
ನಮ್ಮ ದೇಶದ ಪ್ರಧಾನಮಂತ್ರಿಗಳು ಈ ರೀತಿಯಾಗಿ ಹೇಳಿಕೆ ನೀಡುತ್ತಿರುವುದು ಜನರ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದಿದ್ದಾರೆ. ಇದೇ ವೇಳೆ ಉತ್ತರಾಖಂಡ ಭೂಕಂಪವನ್ನು ರಾಹುಲ್ ಗಾಂಧಿಯವರ ಭೂಕಂಪ ಹೇಳಿಕೆಗೆ ಹೋಲಿಕೆ ಮಾಡಿ ವ್ಯಂಗ್ಯ ಮಾಡಿರುವುದಕ್ಕೆ ಮೋದಿಯವರ ವಿರುದ್ಧ ಕಿಡಿಕಾಡಿದ್ದಾರೆ.