ವಿರಾಟ್ ಕೊಹ್ಲಿ - ಗುರ್ಮಿತ್ ರಾಮ್ ರಹೀಮ್
ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ಒಂದೇ ಕ್ರಿಕೆಟ್ ಋತುವಿನ ನಾಲ್ಕು ಟೆಸ್ಟ್ ಸರಣಿಯಲ್ಲಿ ನಾಲ್ಕು ದ್ವಿಶತಕಗಳನ್ನು ಬಾರಿಸುವ ಮೂಲಕ ವಿಶ್ವದಾಖಲೆ ಮಾಡಿರುವ ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಧನೆಗೆ ಅವರ ಕಠಿಣ ಅಭ್ಯಾಸ ಮತ್ತು ಪ್ರತಿ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಸಾಮರ್ಥ್ಯವೇ ಕಾರಣ ಎಂದು ಹಲವರು ನಂಬಿದ್ದಾರೆ. ಆದರೆ ಡೇರಾ ಸಚ್ಚಾ ಸೌದಾ ಧಾರ್ಮಿಕ ನಾಯಕ ಗುರ್‌ಮೀತ್ ರಾಮ್ ರಹೀಮ್ ಮಾತ್ರ ಕೊಹ್ಲಿ ಕ್ರಿಕೆಟ್ ಬದುಕಿನ ಸಾಧನೆಗಳಿಗೆತಾವೇ ಕಾರಣ ಎಂದು ಹೇಳಿಕೊಂಡಿದ್ದಾರೆ.
"ಆತ (ವಿರಾಟ್ ಕೊಹ್ಲಿ ) ಉತ್ತಮ ಆರಂಭವನ್ನು ದೊಡ್ಡ ಮೊತ್ತದ ಸ್ಕೋರ್ ಆಗಿ ಪರಿವರ್ತಿಸಲು ಅಸಮರ್ಥನಾಗಿದ್ದ ಸಂದರ್ಭದಲ್ಲಿ ನನ್ನ ಬಳಿ ಬಂದಿದ್ದ. ಆಗ ನಾನು ಆತನಿಗೆ ಕಠಿನ ಪರಿಶ್ರಮದಿಂದ ಅಭ್ಯಾಸ ನಡೆಸುವಂತೆ ಮತ್ತು ನಿರಂತರವಾಗಿ ಕಲಿಯುವಂತೆ ಸಲಹೆ ಮಾಡಿದ್ದೆ. ಅದನ್ನು ಆತ ಕಟ್ಟುನಿಟ್ಟಾಗಿ ಪಾಲಿಸಿದ. ಅದರಿಂದಾಗಿಯೇ ಆತನಿಗೆ ಕ್ರಿಕೆಟ್‌ನಲ್ಲಿ ದಾಖಲೆಗಳನ್ನು ಮಾಡುವುದು, ಯಶಸ್ಸನ್ನು ಸಾಧಿಸುವುದು ಸಾಧ್ಯವಾಗಿದೆ' ಎಂದು ರಾಮ್ ರಹೀಮ್ ಹೇಳಿರುವುದನ್ನು ಉಲ್ಲೇಖೀಸಿ ಬಾಲಿವುಡ್ ಗಾಸಿಪ್ ಬ್ಲಾಗ್ ಸ್ಪಾಟ್ ಬಾಯ್ ವರದಿ ಮಾಡಿದೆ.
ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ನಂತರ ನನಗೆ ಧನ್ಯವಾದವನ್ನೂ ಹೇಳಿದ್ದ ಎಂದು ಗುರ್ಮಿತ್ ರಾಮ್ ರಹೀಮ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.