ಚೆನ್ನೈ: ಪಕ್ಷ ಒಡೆಯಲು ಪನ್ನೀರ್ ಸೆಲ್ವಂ ಅವರು ಯತ್ನ ನಡೆಸುತ್ತಿದ್ದು, ಜಯಲಲಿತಾ ಅವರ ಆತ್ಮ ಪನ್ನೀರ್ ಸೆಲ್ವಂ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ತಮಿಳುನಾಡು ರಾಜ್ಯದ ಆಡಳಿತಾರೂಢ ಪಕ್ಷ ಎಐಎಡಿಎಂಕೆ ಶುಕ್ರವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಎಐಎಡಿಎಂಕೆ ಪಕ್ಷದ ವಕ್ತಾರ ವೈಗೈಚೆಲ್ವನ್ ಅವರು, ರಾಜಕೀಯದಲ್ಲಿ ಅಂತ್ಯ ಕಂಡವರು ಹಾಗೂ ಅಮ್ಮ ಅವರೇ ತಿರಸ್ಕರಿದ್ದ ನಾಯಕರು ಇಂದು ಪನ್ನೀರ್ ಸೆಲ್ವಂ ಅವರೊಂದಿಗೆ ಕೈಜೋಡಿಸಿದ್ದಾರೆ. ಪನ್ನೀರ್ ಸೆಲ್ವಂ ಅವರು ಪಕ್ಷ ಒಡೆಯಲು ಯತ್ನಿಸುತ್ತಿದ್ದು, ಅಮ್ಮ ಆತ್ಮ ಕೂಡ ಅವರನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಶಶಿಕಲಾ ಅವರೇ ತಮಿಳುನಾಡು ರಾಜ್ಯಕ್ಕೆ ಮುಖ್ಯಮಂತ್ರಿಯಾಗುವ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಶಶಿಕಲಾ ಅವರನ್ನು ಶೀಘ್ರದಲ್ಲೇ ಮುಖ್ಯಮಂತ್ರಿಯಾಗಿ ನೋಡಲಿದ್ದೇವೆ. ನಿನ್ನೆಯಷ್ಟೇ ಚಿನ್ನಮ್ಮ (ಶಶಿಕಲಾ) ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಶೀಘ್ರದಲ್ಲಿಯೇ ಶುಭ ಸುದ್ದಿ ಬರಲಿದೆ ಎಂದು ತಿಳಿಸಿದ್ದಾರೆ.