ದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸ್ನಾನದ ಗೃಹದಲ್ಲೂ ರೇನ್ ಕೋಟ್ ಧರಿಸಿ ಸ್ನಾನ ಮಾಡುತ್ತಾರೆ, ಹೀಗಾಗಿ ಅವರಿಗೆ ಯಾವುದೇ ಕಲೆ ಮೆತ್ತಿಕೊಂಡಿಲ್ಲ ಎಂದು ಪ್ರಧಾನಿ ಮೋದಿ ಮಾಡಿದ್ದ ಟೀಕೆ ತೀವ್ರ ವಿವಾದ ಸೃಷ್ಟಿಸಿದೆ,
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೋದಿ ವಿರುದ್ಧ ಹರಿಹಾಯ್ದಿದ್ದು, ಪ್ರಧಾನಿ ಕ್ಷಮೆ ಯಾಚಿಸುವಂತೆ ಪಟ್ಟು ಹಿಡಿದಿವೆ, ಇದೇ ವೇಳೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮೋದಿ ಅವರನ್ನ ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಗಾಂಧಿ ಕುಟುಂಬ ಹೊರಗಿನ ಅನೇಕ ನಾಯಕರಂತೆ ಮನಮೋಹನ್‌ಸಿಂಗ್‌ರನ್ನೂ "ಬಳಸಿ ಬಿಸಾಕುವ ನಾಯಕ'ನಂತೆ ಬಳಸಿಕೊಳ್ಳುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಎರಡು ಗುಂಪಿನ ನಾಯಕರಿದ್ದಾರೆ. ಒಂದು ನಿರ್ದಿಷ್ಟ ಕುಟುಂಬದಿಂದ ಬಂದವರು ಎಲ್ಲ ಟೀಕೆ, ಟಿಪ್ಪಣಿಗಳಿಂದ ಹೊರತಾದವರು. ಅವರು ತಪ್ಪೇ ಮಾಡುವುದಿಲ್ಲ. ಮತ್ತೂಂದು ಗುಂಪಿಗೆ ಸೇರಿದವರು, ಎಲ್ಲ ರೀತಿ ಬಳಸಲ್ಪಟ್ಟು, ಬಳಿಕ ಬಿಸಾಕಲ್ಪಡುತ್ತಾರೆ. ಸಿಂಗ್ ಅವರು ಈ ಗುಂಪಿಗೆ ಸೇರಿದವರು ಎಂದು ಪ್ರಸಾದ್ ಲೇವಡಿ ಮಾಡಿದ್ದಾರೆ.
ಮನಮೋಹನ್ ಸಿಂಗ್ ಅವರಿಗೆ ಮೋದಿ ಗೌರವ ಕೊಡಲಿಲ್ಲ ಎಂದು ಮಾತನಾಡುವ ಕಾಂಗ್ರೆಸ್ ಶಾಸ್ತ್ರೀಜಿ, ಚೈಧುರಿ ಚರಣ್ ಸಿಂಗ್, ವಿ.ಪಿ ಸಿಂಗ್, ಪಿ.ವಿ ನರಸಿಂಹ ರಾವ್ ಅವರಿಗೆ ಯಾವ ಗೌರವ ನೀಡಿತ್ತು ಎಂದು ಪ್ರಶ್ನಿಸಿದ್ದಾರೆ. ಮನಮೋಹನ್ ಸಿಂಗ್ ಅವರು ಹೊರಡಿಸಿದ್ದ ಸುಗ್ರಿವಾಜ್ಞೆ ಪ್ರತಿಯನ್ನು ರಾಹುಲ್ ಗಾಂಧಿ ಹರಿದು ಹಾಕಿದ್ದರು. ಅಷ್ಟರ ಮಟ್ಟಿಗೆ ಕಾಂಗ್ರೆಸ್ ಪಕ್ಷ ಹಿರಿಯರಾದ ಸಿಂಗ್ ಅವರಿಗೆ ಗೌರವ ನೀಡಿತ್ತು ಎಂದ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.