ಲಕ್ನೋದಲ್ಲಿ ಇಂದು ಮೈತ್ರಿಕೂಟದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಲಕ್ನೋ: ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ 300 ಸೀಟುಗಳನ್ನು ಗೆಲ್ಲಲು ಪಣತೊಟ್ಟಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಜಂಟಿಯಾಗಿ 10 ಬದ್ಧತೆಗಳನ್ನೊಳಗೊಂಡ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಬಿಡುಗಡೆ ಮಾಡಿದರು.
ಇಬ್ಬರು ನಾಯಕರು ಇಂದು ಲಕ್ನೋದಲ್ಲಿ ಸುದ್ದಿಗೋಷ್ಠಿಯಲ್ಲಿ ಜನರಿಗೆ ತಮ್ಮ ಪಕ್ಷ ನೀಡುವ ಬದ್ಧತೆಗಳನ್ನು ಬಿಡುಗಡೆ ಮಾಡಿದರು. ಅವುಗಳಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಎರಡೂ ಪಕ್ಷಗಳು ನೀಡಿದ ಭರವಸೆಗಳು ಸೇರಿವೆ.
ಯುವಕರಿಗೆ ಉಚಿತ ಸ್ಮಾರ್ಟ್ ಫೋನ್ ಗಳು, 20 ಲಕ್ಷ ಯುವಕರಿಗೆ ಕೌಶಲ್ಯಾಭಿವೃದ್ಧಿ ಮೂಲಕ ಉದ್ಯೋಗ ಖಾತ್ರಿ, ರೈತರಿಗೆ ಸಾಲ ಮನ್ನಾ, ಉಚಿತ ವಿದ್ಯುತ್ ಮತ್ತು ಬೆಳೆಗಳಿಗೆ ಸರಿಯಾದ ಬೆಲೆ ಇತ್ಯಾದಿಗಳ ಆಶ್ವಾಸನೆಯನ್ನು ಒಳಗೊಂಡಿವೆ.
ಒಂದು ಕೋಟಿ ಬಡ ಕುಟುಂಬಗಳಿಗೆ 1000 ರೂಪಾಯಿ ತಿಂಗಳ ಪಿಂಚಣಿ, ನಗರದ ಬಡ ಕುಟುಂಬಗಳಿಗೆ 10 ರೂಪಾಯಿಗೆ ಆಹಾರ, ಸರ್ಕಾರಿ ಕೆಲಸಗಳಲ್ಲಿ ಶೇಕಡಾ 33ರಷ್ಟು ಮೀಸಲಾತಿ, ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 50ರಷ್ಟು ಮೀಸಲಾತಿ, ವಿದ್ಯುತ್, ರಸ್ತೆ, ನೀರಿನ ಸೌಲಭ್ಯ ಪ್ರತಿ ಗ್ರಾಮಗಳಿಗೆ, ಒಂಭತ್ತರಿಂದ 12ನೇ ತರಗತಿವರೆಗಿನ ಎಲ್ಲಾ ಹೆಣ್ಣು ಮಕ್ಕಳಿಗೆ ಉಚಿತ ಸೈಕಲ್, ಪ್ರತಿಭಾವಂತ ಮಕ್ಕಳಿಗೆ ಸಹಾಯ, 10 ಲಕ್ಷಕ್ಕೂ ಅಧಿಕ ಬಡ ದಲಿತ ಮತ್ತು ಹಿಂದುಳಿದ ಕುಟುಂಬಗಳಿಗೆ ಉಚಿತ ಮನೆ, ಎಲ್ಲಾ ಜಿಲ್ಲೆ ಮತ್ತು 6 ಪ್ರಮುಖ ನಗರಗಳ ಮೆಟ್ರೊಗಳಿಗೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆ ಮೊದಲಾದವುಗಳು ಕೂಡ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಲ್ಲಿ ಒಳಗೊಂಡಿವೆ.
ಇಂದು ಉತ್ತರ ಪ್ರದೇಶದಲ್ಲಿ ಎರಡು ಕುಟುಂಬಗಳು ಒಂದಾಗಿವೆ. ಇಬ್ಬರು ಯುವಕರು ಒಂದಾಗಿದ್ದಾರೆ. ಈ ಮೂಲಕ ರಾಜ್ಯದ ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಿಳಿಸಿದರು.