ತಿರುವಣ್ಣಾಮಲೈ: ತಿರುವಣ್ಣಾಮಲೈ ನಲ್ಲಿ ಫೆ.12 ರಂದು ಬೆಳಿಗ್ಗೆ ಎಐಎಡಿಎಂಕೆ ಸದಸ್ಯನ ಬರ್ಬರ ಹತ್ಯೆಯಾಗಿದೆ. ಎಸ್ ಕನಕರಾಜ್(40) ಹತ್ಯೆಗೀಡಾಗಿರುವ ಎಐಎಡಿಎಂಕೆ ಮುಖಂಡನಾಗಿದ್ದು, ಇತ್ತೀಚಿನವರೆಗೂ ತಿರುವಣ್ಣಾಮಲೈ ನ ಪಟ್ಟಣ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಕನಕರಾಜ್ ಹತ್ಯೆ ನಡೆದಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆ ಬ್ಯಾಡ್ಮಿಂಟನ್ ಆಟ ಆಡಿ ವಾಪಸ್ಸಾಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.
ಹಲ್ಲೆ ನಡೆಸಿ ಹತ್ಯೆ ಮಾಡಿರುವವರು ಡಿಎಂಕೆ ಬೆಂಬಲಿಗರು ಎಂದು ಹೇಳಲಾಗುತ್ತಿದ್ದು, ಆರೋಪಿಗಳಾದ ಬಾಬು(28), ರಾಜಾ(35) ಸರವಣನ್(30) ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ತಿರುವಣ್ಣಾಮಲೈ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಒಂದು ವರ್ಷದ ಹಿಂದೆ ಕನಕರಾಜ್ ಗೆ 5 ಕೋಟಿ ರೂಪಾಯಿಗೆ ಭೂಮಿಯೊಂದನ್ನು ಮಾರಾಟ ಮಾಡಿದ್ದೆವು. ಆ ನಂತರ ಕನಕರಾಜ್ ಆ ಭೂಮಿಯನ್ನು ಮತ್ತೋರ್ವರಿಗೆ ಮಾರಾಟ ಮಾಡಿದ್ದರು. ಆದರೆ ನಮಗೆ ಕೊಡಬೇಕಿದ್ದ ಬಾಕಿ ಹಣವನ್ನು ಕೊಟ್ಟಿರಲಿಲ್ಲ, ತಮಗೆ ಬರಬೇಕಿದ್ದ ಹಣವನ್ನು ನೀಡುವಂತೆ ಹಲವು ಬಾರಿ ಕೇಳಿದ್ದರೂ ಪ್ರಯತ್ನಗಳೆಲ್ಲಾ ವ್ಯರ್ಥವಾಗಿತ್ತು ಎಂದು ಹತ್ಯೆಯ ಆರೋಪಿಗಳು ಹೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ.