ಚೆನ್ನೈ: ಪನ್ನೀರ್ ಸೆಲ್ವಂ ಓರ್ವ ದ್ರೋಹಿ.. ಅವರ ನಿಜವಾದ ಬಣ್ಣ ಈಗಷ್ಟೇ ಬಯಲಾಗುತ್ತಿದೆ. ಕಳೆದ 33 ವರ್ಷದಲ್ಲಿ ನಾವು ಇಂತಹ ಸಾವಿರ ಪನ್ನೀರ್ ಸೆಲ್ವಂರನ್ನು ನೋಡಿದ್ದೇವೆ. ಇದಕ್ಕೆಲ್ಲಾ ನಾವು ಹೆದರುವುದಿಲ್ಲ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಹೇಳಿದ್ದಾರೆ.
ಚೆನ್ನೈನಲ್ಲಿರುವ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ಮಾತನಾಡಿದ ಶಶಿಕಲಾ, ತಮ್ಮ ಎದುರಾಳಿ ಪನ್ನೀರ್ ಸೆಲ್ವಂ ಹಾಗೂ ಅವರ ಬಣದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಪನ್ನೀರ್ ಸೆಲ್ವಂ ಓರ್ವ ದ್ರೋಹಿ.. ಅವರ ನಿಜವಾದ ಬಣ್ಣ ಈಗಷ್ಟೇ ಬಯಲಾಗುತ್ತಿದೆ. ಪನ್ನೀರ್ ಸೆಲ್ವಂ ಅವರೇ ಪಕ್ಷದ ಮತ್ತು ಸರ್ಕಾರದ ಉಸ್ತುವಾರಿ ವಹಿಸಿಕೊಳ್ಳುವಂತೆ ತಮ್ಮ ಮೇಲೆ ಒತ್ತಡ ಹೇರಿದ್ದರು. ಆದರೆ ನಾನು ಇಂತಹ ಪರಿಸ್ಥಿತಿಯಲ್ಲಿ ಅಧಿಕಾರ ಸ್ವೀಕರಿಸುವುದು ಸರಿಯಲ್ಲ ಎಂದು ಹೇಳಿದ್ದೆ. ಹೀಗಾಗಿ ಪನ್ನೀರ್ ಸೆಲ್ವಂ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು".
ಜಯಾ ಸಾವಿನ ಬಳಿಕ ನಾನು ತುಂಬಾ ದುಃಖದಲ್ಲಿದ್ದೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷದ ಜವಾಬ್ದಾರಿ ತನ್ನ ಹೆಗಲ ಮೇಲಿದೆ. ಈ ಸತ್ಯಾಂಶವನ್ನು ಎಲ್ಲರೂ ತಿಳಿಯಬೇಕು. ಅಮ್ಮಾ ಸತ್ತಾಗಲೇ ಪಕ್ಷದಲ್ಲಿನ ಷಡ್ಯಂತ್ರಗಳು ಹೊರ ಬಿದ್ದವು, ಪಕ್ಷವನ್ನು ಇಬ್ಭಾಗ ಮಾಡುವ ಷಡ್ಯಂತ್ರ ನಡೆಯುತ್ತಿದ್ದು, ಅಮ್ಮಾ ನಂಬಿದ್ದವರೇ ಪಕ್ಷವನ್ನು ಇಬ್ಭಾಗ ಮಾಡುವಂತಹ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಅವರ ಪ್ರಯತ್ನ ಸಫಲವಾಗಲು ತಾವು ಬಿಡುವುದಿಲ್ಲ ಎಂದು ಶಶಿಕಲಾ ಹೇಳಿದ್ದಾರೆ.