ದೇಶ

ಕೆಲಸದ ಬಗ್ಗೆ ಮಾತನಾಡುತ್ತೀರಾ? ನಡೆಯಿರಿ ಮೆಟ್ರೋದಲ್ಲಿ ಸಂಚರಿಸೋಣ: ಅಭಿವೃದ್ಧಿ ಕುರಿತು ಅಖಿಲೇಶ್'ಗೆ ಮೋದಿ ತಿರುಗೇಟು

Manjula VN

ಲಖಿಮಪುರ್ ಖೇರಿ: ಕೆಲಸದ ಬಗ್ಗೆ ಮಾತನಾಡುತ್ತೀರಾ...ನಡೆಯಿರಿ ಲಖನೌ ಮೆಟ್ರೋದಲ್ಲಿ ಸಂಚರಿಸೋಣ ಎಂದು ಅಭಿವೃದ್ಧಿ ಕುರಿತಂತೆ ಮಾತನಾಡುತ್ತಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ತಿರುಗೇಟು ನೀಡಿದ್ದಾರೆ.

ಲಖಿಮಪುರ್ ಖೇರಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಅಭಿವೃದ್ಧಿ ಕೆಲಸ ಮಾತನಾಡುತ್ತದೆ ಎಂದು ಅಖಿಲೇಶ್ ಅವರು ಹೇಳಿದ್ದಾರೆ. ಆದರೆ, ಯೋಜನೆಗಳು ಈಗಲೂ ಅಪೂರ್ಣವಾಗಿವೆ. ಲಖನೌನಲ್ಲಿ ಸಂಚರಿಸಲು ನಾನು ಸಿದ್ಧನಿದ್ದೇನೆ. ಅಖಿಲೇಶ್ ಅವರು ನನ್ನೊಂದಿಗೆ ಸಂಚರಿಸುವಂತೆ ಕೇಳುತ್ತಿದ್ದೇನೆ. ನಡೆಯಿರಿ ಲಖನೌ ಮೆಟ್ರೋದಲ್ಲಿ ಸಂಚರಿಸೋಣ. ಟಿಕೆಟ್ ಪಡೆದು ಪ್ರಯಾಣ ಮಾಡೋಣ. ಭಾರತ ಸರ್ಕಾರ ಯೋಜನೆಗಳಿಗೆ ಹಣವನ್ನು ನೀಡುತ್ತಿದೆ. ಉದ್ಘಾಟನಾ ಸಮಾರಂಭಕ್ಕೆ ಕೇಂದ್ರಕ್ಕೆ ಆಹ್ವಾನ ನೀಡಿಲ್ಲ. ತರಾತುರಿಯಲ್ಲಿ ಉದ್ಘಾಟನೆಯನ್ನು ನೆರವೇರಿಸಲಾಗಿದೆ. ಉದ್ಘಾಟನೆಯಾದರೂ ಈ ವರೆಗೂ ನಿಲ್ದಾಣ ಸಿದ್ಧವಾಗಿಲ್ಲ. ರೈಲು ಸಂಚರಿಸುತ್ತಿಲ್ಲ ಎಂದು ಅಖಿಲೇಶ್ ವಿರುದ್ಧ ಕಿಡಿಕಾರಿದ್ದಾರೆ.

ಜನರನ್ನು ಹೀಗೆಯೇ ಮೂರ್ಖರನ್ನಾಗಿಸುತ್ತಿದ್ದರೆ, ಜನರಿಗೆ ಹೇಗೆ ಉಪಯೋಗವಾಗುತ್ತದೆ. ತರಾತುರಿಯಲ್ಲಿ ಮೇದಾಂತ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಾಯಿತು. ನಡೆಯಿರಿ ಮೇದಾಂತ ಆಸ್ಪತ್ರೆಗೆ ಹೋಗೋಣ. ನಮ್ಮ ಬಿಪಿಯನ್ನು ಪರೀಕ್ಷಿಸೋಣ...ನಂತರವಷ್ಟೇ ನಾನು ನಿಮ್ಮ ಅಭಿವೃದ್ಧಿ ಕಾರ್ಯಗಳನ್ನು ಒಪ್ಪುತ್ತೇನೆ. ಆಸ್ಪತ್ರೆಯನ್ನಷ್ಟೇ ಉದ್ಘಾಟನೆ ಮಾಡಲಾಗಿದ್ದು, ವ್ಯವಸ್ಥೆ ಒದಗಿಸುವುದರಲ್ಲಿ ಸರ್ಕಾರ ವಿಫಲವಾಗಿದೆ ಎಂದು ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಉಳಿಯುವುದಕ್ಕೆ ಅವಕಾಶವಿಲ್ಲ. ನಮಗೆ ಒಂದು ಅವಕಾಶವನ್ನು ಕೊಡಿ. 6 ತಿಂಗಳೊಳಗಾಗಿ ಎಲ್ಲಾ ಕ್ರಿಮಿನಲ್ ಗಳನ್ನೂ ನಾವು ಜೈಲಿನ ಹಿಂದೆ ಇರುವಂತೆ ಮಾಡುತ್ತೇವೆ. ರಾಜ್ಯದಲ್ಲಿ ಸಂಜೆಯಾಗುತ್ತಿದ್ದಂತೆಯೇ ಸಹೋದರಿಯರು ಸ್ವತಂತ್ರರಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಕೃಷ್ಣ ಮತ್ತು ರಾಮನಿದ್ದ ಭೂಮಿಯನ್ನು ಎಂತಹ ರೀತಿಯಲ್ಲಿ ಪರಿವರ್ತಿಸಲಾಗಿದೆ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರೈತರಿಗೆ ಭರವಸೆ ನೀಡಿರುವ ಅವರು ಅಧಿಕಾರಕ್ಕೆ ಬಂದ 14 ದಿನಗಳೊಳಗಾಗಿ ಕಬ್ಬು ಬೆಳೆಗಾರರ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

SCROLL FOR NEXT