ಮುಂಬೈ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ್ದ 'ರೇನ್ ಕೋಟ್' ಹೇಳಿಕೆಗೆ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಖಂಡನೆ ವ್ಯಕ್ತಪಡಿಸಿದ್ದು, ಬೇರೊಬ್ಬರ ಬಾತ್'ರೂಮ್'ನಲ್ಲಿ ಇಣುಕು ನೋಡುವುದನ್ನು ಬಿಟ್ಟು, ನಿಮ್ಮ ಹುದ್ದೆಯ ಘನತೆಯನ್ನು ಕಾಪಾಡಿಕೊಂಡು ಹೋಗಿ ಎಂದು ಸೋಮವಾರ ಹೇಳಿದೆ.
ಈ ಕುರಿತಂತೆ ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಬರೆದುಕೊಂಡಿದೆ. ಉತ್ತರಪ್ರದೇಶದ ಚುನಾವಣಾ ಪ್ರಚಾರದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿರೋಧಪಕ್ಷಗಳ ಜಾತಕ ನಮ್ಮ ಕೈಯಲ್ಲಿದೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಅಖಿಲೇಶ್ ಯಾದವ್ ಅವರು, ಅಂತರ್ಜಾಲಗಳಲ್ಲಿ ಉಚಿತವಾಗಿಯೇ ಜಾತಕಗಳು ಲಭ್ಯವಿರುತ್ತದೆ ಎಂದು ಹೇಳಿದ್ದರು. ಚುನಾವಣೆ ವೇಳೆ ಎಷ್ಟು ಕೀಳು ಮಟ್ಟದಲ್ಲಿ ಪ್ರಚಾರ ನಡೆಸಲಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.
ತಾವಿರುವ ಸ್ಥಾನ ಎಷ್ಟರ ಮಟ್ಟಿಗೆ ಸಮಗ್ರತೆ ಹಾಗೂ ಘನತೆಯನ್ನು ಹೊಂದಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಿದ್ದು, ಕನಿಷ್ಟ ಪಕ್ಷ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಾದರೂ ರಾಜಕೀಯ ಕೆಸರೆರಚಾಟಗಳಲ್ಲಿ ಭಾಗಿಯಾಗಬಾರದು ಎಂದು ಶಿವಸೇನೆ ಹೇಳಿದೆ.
ಉತ್ತರಪ್ರದೇಶ ಚುನಾವಣೆಯಲ್ಲಿ ಏನು ಆಗಬೇಕು ಅದು ಆಗುತ್ತದೆ. ಪ್ರಧಾನಮಂತ್ರಿಗಳು ದೆಹಲಿ ಬಗ್ಗೆ ಗಮನ ಹರಿಸಬೇಕಿದೆ. ಉತ್ತರಪ್ರದೇಶದ ಕಡೆ ಗಮನ ಕೊಡಲು ಅಲ್ಲಿ ಮುಖ್ಯಮಂತ್ರಿಗಳಿದ್ದಾರೆಂದು ತಿಳಿಸಿದೆ.
ಇದೇ ವೇಳೆ ಮನಮೋಹನ್ ಸಿಂಗ್ ಅವರ ಕುರಿತ ಹೇಳಿಕೆಗೆ ತಿರುಗೇಟು ನೀಡಿರುವ ಶಿವಸೇನೆ, ಮತ್ತೊಬ್ಬರ ಬಾತ್'ರೂಮಿನಲ್ಲಿ ಇಣುಕಿ ನೋಡುವುದನ್ನು ಮೋದಿ ನಿಲ್ಲಿಸಬೇಕು. ಪ್ರಧಾನಿ ಹುದ್ದೆಗಿರುವ ಘನತೆಗೆ ತಕ್ಕಂತೆ ಮಾತನಾಡಬೇಕಿದೆ ಎಂದು ಸಲಹೆ ನೀಡಿದೆ.
ಕೈಯಲ್ಲಿ ಅಧಿಕಾರ ಇಟ್ಟುಕೊಂಡು ವಿರೋಧ ಪಕ್ಷಗಳಿಗೆ ಬೆದರಿಕೆ ಹಾಕುವುದು ರಾಜಕೀಯ ಭ್ರಷ್ಟಾಚಾರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ಭ್ರಷ್ಟಾಚಾರ ಎಂಬುದು ಬಹಿರಂಗವಾಗಿ ನಡೆಯುತ್ತಿದೆ. ಪ್ರಧಾನಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಚುನಾವಣಾ ಪ್ರಚಾರ ನಡೆಸುವಾಗ ಸವಾಲು, ಪ್ರತಿ ಸವಾಲು ಹಾಗೂ ಭರವಸೆಗಳು ಹಾಗೂ ಬದರಿಕೆಗಳನ್ನು ಒಡ್ಡುತ್ತಿದ್ದಾರೆ. ಯಾವ ಕಾನೂನು ಮತ್ತು ನಿಯಮಗಳ ಪ್ರಕಾರ ಈ ರೀತಿಯಲ್ಲಿ ನಡೆಯಲಾಗುತ್ತಿದೆ?...
ಆಧಿಕಾರ ನಿಮ್ಮ ಕೈಯಲ್ಲಿದೆ ಎಂಬ ಕಾರಣಕ್ಕೆ ವಿರೋಧ ಪಕ್ಷಗಳ ಜಾತಕ ನಿಮ್ಮ ಕೈಯಲ್ಲಿದೆ ಎಂದು ಹೇಳುತ್ತಿದ್ದೀರಿ. ಅವರ ಜಾತಕ ಬದಲಿಸುತ್ತೇನೆಂದು ನೀವು ಹೇಳಿದರೆ, ಜಾತಕದ ಹೆಸರಿನಲ್ಲಿ ನೀವು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ. ಜಾತಕದ ಹೆಸರಿನಲ್ಲಿ ರಾಜಕೀಯ ಪಕ್ಷಗಳ ವಿರುದ್ಧ ಮಾತನಾಡಲು ಜನತೆ ನಿಮಗೆ ಅಧಿಕಾರವನ್ನು ಕೊಟ್ಟಿಲ್ಲ. ನೀವು ಅಧಿಕಾರದಿಂದ ಕೆಳಗೆ ಇಳಿದ ನಂತರ ನಿಮ್ಮ ಜಾತಕ ಕೂಡ ಉತ್ತರಾಧಿಕಾರಿಗಳ ಕೈಯಲ್ಲಿರುತ್ತದೆ ಎಂಬುದನ್ನು ಮರೆಯಬೇಡಿ ಎಂದು ಶಿವಸೇನೆ ಮೋದಿಯವರಿಗೆ ಎಚ್ಚರಿಕೆ ನೀಡಿದೆ.