ಚೆನ್ನೈ: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾಗೆ ನಾಲ್ಕು ವರ್ಷ ಜೈಲು ಶಿಕ್ಷೆ ತೀರ್ಪು ಹೊರಬಿದ್ದಿದೆ. ಇನ್ನು ತೀರ್ಪಿಗೂ ಮುನ್ನವೇ ಗೋಲ್ಡನ್ ರೆಸಾರ್ಟ್ ನಲ್ಲಿ ಶಶಿಕಲಾ ಕಪಿಮುಷ್ಠಿಯಲ್ಲಿದ್ದ ಇಬ್ಬರು ಶಾಸಕರು ಟೀ ಶರ್ಟ್, ಶಾರ್ಟ್ಸ್ ನಲ್ಲೇ ಪರಾರಿಯಾಗಿದ್ದಾರೆ.
ರೆಸಾರ್ಟ್ ನಿಂದ ಹೊರ ಬಂದ ಇಬ್ಬರು ಶಾಸಕರಾದ ಎಸ್ ಸೆಮ್ಮಲೈ ಮತ್ತು ಎಸ್ಎಸ್ ಶರವಣನ್ ತಮಿಳುನಾಡು ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಬಣವನ್ನು ಸೇರಿಕೊಂಡಿದ್ದಾರೆ. ಇದರಲ್ಲಿ ಶರಣವನ್ ನಿನ್ನೆ ರಾತ್ರಿಯೇ ಪನ್ನೀರ್ ಸೆಲ್ವಂ ಬಣ ಸೇರಿಕೊಂಡಿದ್ದರೆ ಸೆಮ್ಮಲೈ ಇಂದು ಸೇರಿಕೊಂಡರು.
ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ನೂರಕ್ಕೂ ಅಧಿಕ ಶಾಸಕರನ್ನು ಕೂಡಿ ಹಾಕಲಾಗಿದ್ದು ತೀವ್ರ ಕಣ್ಗಾವಲು ನಡೆಸುತ್ತಿದ್ದ ದಢೂತಿ ಗಾರ್ಡ್ ಗಳ ಕಣ್ತಪ್ಪಿಸಿ ತಾನು ಕೇವಲ ಟಿ ಶರ್ಟ್ ಮತ್ತು ಬರ್ಮುಡಾ(ಶಾರ್ಟ್ಸ್)ನಲ್ಲಿ ಯಾರಿಗೂ ಗೊತ್ತಾಗದಂತೆ ವೇಷ ಮರೆಸಿಕೊಂಡು ರೆಸಾರ್ಟ್ ನ ಎತ್ತರದ ಗೋಡೆಯನ್ನು ಹತ್ತಿ ಹಾರಿ ತಪ್ಪಿಸಿಕೊಂಡು ಬಂದಿರುವುದಾಗಿ ಶಾಸಕರು ತಿಳಿಸಿದ್ದಾರೆ.