ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ
ನವದೆಹಲಿ:ಭಾರತದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚುತ್ತಿದ್ದರೆ, ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ನೀಡಿರುವ ಹೇಳಿಕೆಯನ್ನು ಬೆಂಬಲಿಸಿರುವ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ, ಹಿಂದೂಗಳು ಬಹುಸಂಖ್ಯೆಯಲ್ಲಿ ಇರುವುದರಿಂದ ದೇಶದಲ್ಲಿ ಪ್ರಜಾಪ್ರಭುತ್ವವಿದೆ ಎಂದು ಹೇಳಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಇಂದು ಮಾತನಾಡಿದ ಅವರು, ಹಿಂದೂಗಳು ಬಹುಸಂಖ್ಯಾತರಾಗಿರುವುದರಿಂದ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಮುಸಲ್ಮಾನರು ಅಧಿಕ ಸಂಖ್ಯೆಯಲ್ಲಿರುವುದರಿಂದ ಅಲ್ಲಿ ಪ್ರಜಾಪ್ರಭುತ್ವವಿಲ್ಲ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಹಿಂದೂಗಳ ಸಂಖ್ಯೆ ಅಧಿಕವಾಗಿರಲೇಬೇಕು. ಅದನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಪ್ರಶ್ನೆ ಎದುರಾಗುತ್ತದೆ. ಮುಸಲ್ಮಾನರು ಕೂಡ ಹಿಂದೂಗಳಂತೆ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡರೆ ಆಗ ಈ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
2001 ಮತ್ತು 2011ರ ಜನಗಣತಿ ಪ್ರಕಾರ ಭಾರತ ದೇಶದಲ್ಲಿ ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ ಎಂದರು.
ಸಚಿವ ಕಿರಣ್ ರಿಜಿಜು ಅವರು ಮೂಲತಃ ದೇಶದಲ್ಲಿ ಹಿಂದೂಗಳ ಸಂಖ್ಯೆ ಕ್ಷೀಣಿಸುವುದರ ಬಗ್ಗೆ ಹೇಳಿದ್ದರು. ಅದನ್ನು ಸಂದರ್ಭದಲ್ಲಿ ಹೊರಗೆ ತೆಗೆದು ವಿವಾದ ಸೃಷ್ಟಿಸಲಾಗಿದೆ. ಹಿಂದೂ ನಾಗರಿಕತೆ ಸರಾಗವಾಗಿ ನಡೆಯಬೇಕಾಗಿದ್ದು ಅದನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ ಎಂದರು.
ಬಿಜೆಪಿ ಅರುಣಾಚಲ ಪ್ರದೇಶವನ್ನು ಹಿಂದೂ ರಾಜ್ಯವನ್ನಾಗಿ ಮಾರ್ಪಾಡು ಮಾಡಲು ಪ್ರಯತ್ನಿಸುತ್ತದೆ ಎಂದು ಕಾಂಗ್ರೆಸ್ ಮಾಡಿದ್ದ ಆರೋಪಕ್ಕೆ ಕೇಂದ್ರ ಸಚಿವ ಕಿರಣ್ ರಿಜಿಜು, ನಮ್ಮ ದೇಶದಲ್ಲಿ ಹಿಂದೂ ಜನರ ಸಂಖ್ಯೆ ಕ್ಷೀಣಿಸುತ್ತಿದೆ ಏಕೆಂದರೆ ಹಿಂದೂಗಳು ಬೇರೆಯವರನ್ನು ಮತಾಂತರ ಮಾಡಲು ಪ್ರಯತ್ನಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದರು.