ಹುತಾತ್ಮ ಯೋಧರಿಗೆ ಸೇನೆಯಿಂದ ಶ್ರದ್ಧಾಂಜಲಿ
ಶ್ರೀನಗರ: ಕಾಶ್ಮೀರದಲ್ಲಿ ಒಳನುಸುಳುಕೋರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದ 4 ಯೋಧರಿಗೆ ಸೇನೆ ಶ್ರದ್ಧಾಂಜಲಿ ಸಲ್ಲಿಸಿದೆ.
ಕುಪ್ವಾರ ಬಂಡಿಪೋರಾ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ 4 ಯೋಧರು ಹುತಾತ್ಮರಾಗಿದ್ದರು. ಕಣಿವೆಯಲ್ಲಿ ಕಾರ್ಯನಿರ್ವಹಿಸುವ ಭದ್ರತಾ ಸಿಬ್ಬಂದಿಗಳು, ಹಾಗೂ ಇನ್ನಿತರ ಸಿಬ್ಬಂದಿಗಳೊಂದಿಗೆ ಲೆಫ್ಟಿನೆಂಟ್ ಗೌರ್ನರ್ ಜೆಎಸ್ ಸಂಧು ಹುತಾತ್ಮ ಯೋಧರಾದ ಮೇಜರ್ ಸತೀಶ್ ದಹಿಯಾ, ರೈಫಲ್ ಮೆನ್ ರವಿ ಕುಮಾರ್, ಪಾರಾಟ್ರೂಪರ್ ಧರ್ಮೇಂದ್ರ ಕುಮಾರ್ ಹಾಗೂ ಅಶುತೋಶ್ ಕುಮಾರ್ ಗೆ ಗೌರವ ನಮನ ಸಲ್ಲಿಸಿದ್ದಾರೆ.
ಹಂದ್ವಾರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೇನೆ ಮೂವರು ಉಗ್ರರನ್ನು ಹತ್ಯೆ ಮಾಡಿತ್ತು ಈ ಮೂಲಕ ಉತ್ತರ ಕಾಶ್ಮೀರದಲ್ಲಿರುವ ಉಗ್ರರಿಗೆ ಹೊಡೆತ ನೀಡಿತ್ತು. ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಮೇಜರ್ ಸತೀಶ್ ದಹಿಯಾ ಹುತಾತ್ಮರಾಗಿದ್ದಾರೆ. ಹರ್ಯಾಣ ಮೂಲದವರಾಗಿದ್ದ ಸತೀಶ್ ದಹಿಯಾ, ಈ ಹಿಂದೆಯೂ ಹಲವು ಬಾರಿ ಉಗ್ರ ವಿರೋಧಿ ಕಾರ್ಯಾಚರಣೆಗಳನ್ನು ನಡೆಸಿದ್ದರು.
33 ವರ್ಷದ ರೈಫಲ್ ಮೆನ್ ರವಿ ಕುಮಾರ್ ಜಮ್ಮು-ಕಾಶ್ಮೀರದ ಸಾಂಬಾದ ಮೂಲದವರಾಗಿದ್ದು ಪತ್ನಿ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇನ್ನು ಧರ್ಮೇಂದ್ರ ಕುಮಾರ್ (26) ವರ್ಷದ ಉತ್ತರಾಖಂಡ್ ಮೂಲದವರಾಗಿದ್ದಾರೆ. ಅಶುತೋಶ್ ಕುಮಾರ್ ಉತ್ತರ ಪ್ರದೇಶದ ಮೂಲದವರಾಗಿದ್ದು, ತಾಯಿಯನ್ನು ಅಗಲಿದ್ದಾರೆ. ಅಶುತೋಶ್ ಕುಮಾರ್ ಅವರ ತಂದೆ ಲಾಲ್ ಸಾಹೀಬ್ ಸಹ ಹುತಾತ್ಮ ಯೋಧರಾಗಿದ್ದು, ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದರು.