ವಿವಾಹ ಸಮಾರಂಭ (ಸಾಂಕೇತಿಕ ಚಿತ್ರ)
ನವದೆಹಲಿ: ಸಂಪತ್ತಿನ ಪ್ರದರ್ಶನಕ್ಕಾಗಿ ಮದುವೆ ಸಮಾರಂಭಗಳಿಗೆ ಎಗ್ಗಿಲ್ಲದೇ ಖರ್ಚು ಮಾಡುವುದಕ್ಕೆ ಕಡಿವಾಣ ಹಾಕುವುದಕ್ಕೆ ಲೋಕಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಲಾಗಿದೆ.
ಮದುವೆ ಸಮಾರಂಭಕ್ಕೆ ಅತಿ ಹೆಚ್ಚು ಅತಿಥಿಗಳನ್ನು ಆಹ್ವಾನಿಸುವುದಕ್ಕೆ ಕಡಿವಾಣ ಹಾಕಲಿರುವ ಮಸೂದೆಯ ಪ್ರಕಾರ, 5 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಖರ್ಚು ಮಾಡಿದ ಹಣದಲ್ಲಿ ಶೇ.10 ರಷ್ಟು ಹಣವನ್ನು ಬಡ ಹೆಣ್ಣು ಮಕ್ಕಳ ಮದುವೆ ಕಾರ್ಯಕ್ರಮಗಳಿಗೆ ನೀಡುವುದು ಕಡ್ಡಾಯವಾಗಿದೆ.
ಕಾಂಗ್ರೆಸ್ ಸಂಸದೆ ರಂಜಿತ್ ರಂಜನ್ (ಸಂಸದ ಪಪ್ಪು ಯಾದವ್ ಪತ್ನಿ) ವಿವಾಹ (ಕಡ್ಡಾಯ ನೋಂದಣಿ ಮತ್ತು ವ್ಯರ್ಥ ವೆಚ್ಚದ ತಡೆಗಟ್ಟುವಿಕೆ) ಮಸೂದೆ-2016 ಮಸೂದೆಯನ್ನು ಮಂಡಿಸಿದ್ದು, ಮುಂದಿನ ಲೋಕಸಭೆಯ ಕಲಾಪದಲ್ಲಿ ಇದನ್ನು ಖಾಸಗಿ ಮಸೂದೆಯನ್ನಾಗಿ ಪರಿಗಣಿಸುವ ಸಾಧ್ಯತೆ ಇದೆ. ಮದುವೆ ಕಾರ್ಯಕ್ರಮಗಳಿಗೆ ಎಗ್ಗಿಲ್ಲದೇ, ವ್ಯರ್ಥವಾಗುವ ಖರ್ಚನ್ನು ತಡೆಗಟ್ಟುವುದು ಮದುವೆಯ ಪ್ರಮುಖ ಉದ್ದೇಶವಾಗಿದೆ.
ಸರಳ ವಿವಾಹ ಆಚರಣೆಯನ್ನು ಉತ್ತೇಜಿಸಬೇಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಕಾರ್ಯಕ್ರಮಗಳಿಗೆ ದುಂದು ವೆಚ್ಚ ಮಾಡಲಾಗುತ್ತಿದೆ. ಮದುವೆ ಎಂದರೆ ಸಂಪತ್ತು ಪ್ರದರ್ಶನ ಎಂಬಂತಾಗಿದೆ, ಬಡ ಕುಟುಂಬಗಳು ಹೆಚ್ಚು ಖರ್ಚು ಮಾಡಲು ಸಾಮಾಜಿಕ ಒತ್ತಡ ಹೆಚ್ಚುತ್ತಿದೆ, ಇದಕ್ಕೆ ಕಡಿವಾಣ ಹಾಕಬೇಕು, ದೊಡ್ಡ ಮಟ್ಟದಲ್ಲಿ ಇದು ಸಮಾಜಕ್ಕೆ ಒಳಿತಾದ ಬೆಳವಣಿಗೆಯಲ್ಲ ಎಂದು ರಂಜಿತ್ ರಂಜನ್ ಅಭಿಪ್ರಾಯಪಟ್ಟಿದ್ದಾರೆ.
ಯಾವುದೇ ಕುಟುಂಬ ವಿವಾಹ ಕಾರ್ಯಕ್ರಮಗಳಿಗೆ 5 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಆ ಕುಟುಂಬ ಮದುವೆಗೆ ಖರ್ಚು ಮಾಡುತ್ತಿರುವ ಪೂರ್ತಿ ಮೊತ್ತದ ಬಗ್ಗೆ ಮೊದಲೇ ವಿವರಣೆ ನೀಡಬೇಕು ಹಾಗೂ ಅದರಲ್ಲಿ ಶೇ.10 ರಷ್ಟು ಹಣವನ್ನು ಬಡ ಹೆಣ್ಣು ಮಕ್ಕಳ ಕಲ್ಯಾಣಾಭಿವೃದ್ಧಿಗೆ ನೀಡಬೇಕು ಎಂಬುದು ಮಸೂದೆಯ ಪ್ರಮುಖ ಅಂಶವಾಗಿದೆ. ಮಸೂದೆ ಜಾರಿಯಾದರೆ, ಮದುವೆ ಕಾರ್ಯಕ್ರಮಕ್ಕಾಗಿ ಅತಿಥಿಗಳ ಆಹ್ವಾನಕ್ಕೂ ಮಿತಿ ಹೇರುವ ಸಾಧ್ಯತೆ ಇದೆ.