ದೇಶ

ಬಹುಮತ ಸಾಬೀತಿಗೆ ವೇದಿಕೆ ಸಿದ್ಧ; ಸಿಎಂ ಪಳನಿ ಸ್ವಾಮಿಯಿಂದ ಶಶಿಕಲಾ ಭೇಟಿ ಸಾಧ್ಯತೆ

Srinivasamurthy VN

ಚೆನ್ನೈ: ಎಐಎಡಿಎಂಕೆ ಬಿಕ್ಕಟ್ಟಿನ ನಡುವೆಯೇ ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದ ಶಶಿಕಲಾ ಭಂಟ ಎಡಪಾಡಿ ಪಳನಿ ಸ್ವಾಮಿ ನಿರೀಕ್ಷೆಯಂತೆಯೇ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು,  ಶುಕ್ರವಾರ ಶಶಿಕಲಾ ಅವರನ್ನು ಭೇಟಿ ಮಾಡಿ ಚರ್ಚಿಸುವ ಸಾಧ್ಯತೆ ಇದೆ.

ನಿನ್ನೆ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರ ಆಹ್ವಾನದ ಮೇರೆಗೆ ರಾಜಭವನಕ್ಕೆ ತೆರಳಿದ್ದ ಪಳನಿ ಸ್ವಾಮಿ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ತಮ್ಮೊಂದಿಗೆ ಎಐಎಡಿಎಂಕೆ ಮೂವತ್ತು ಮಂದಿ ಶಾಸಕರೂ ಕೂಡ  ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇಂದು ಪಳನಿಸ್ವಾಮಿ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಆಗಮಿಸಿ ಮುಖ್ಯಸ್ಥೆ ಶಶಿಕಲಾ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಬಹುಮತ ಸಾಭೀತಿಗೆ ಸಂಬಂಧಿಸಿದಂತೆ  ಉಭಯ ನಾಯಕರು ಚರ್ಚೆ ನಡೆಸಲಿದ್ದು, ಮುಂದೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಶಶಿಕಲಾರಿಂದ ಪಳನಿ ಸ್ವಾಮಿ ಸೂಚನೆಗಳನ್ನು ಪಡೆಯಲಿದ್ದಾರೆ.

ಇನ್ನು ಇದೇ ಶನಿವಾರ ಅಂದರೆ ನಾಳೆ ತಮಿಳುನಾಡು ಅಧಿವೇಶನ ಕರೆಯುವ ಸಾಧ್ಯತೆ ಇದ್ದು, ನಾಳೆಯೇ ಪಳನಿ ಸ್ವಾಮಿ ತಮ್ಮ ಬಹುಮತ ಸಾಭೀತು ಮಾಡುವ ಸಾಧ್ಯತೆ ಇದೆ.

ಪನ್ನೀರ್ ಸೆಲ್ವಂ ಮುಂದಿನ ದಾರಿ ಏನು?
ಇನ್ನು ಶಶಿಕಲಾ ಅವರನ್ನು ವಿರೋಧಿಸಿ ತಮ್ಮ ರಾಜಿನಾಮೆ ನಿರ್ಧಾರವನ್ನು ಹಿಂದಕ್ಕೆ ಪಡೆದಿದ್ದ ಮಾಜಿ ಸಿಎಂ ಪನ್ನೀರ್ ಸೆಲ್ವಂ ಅವರ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದ್ದು, ತಮ್ಮ ಬಂಡಾಯ ಬದಿಗಿಟ್ಟು ಪಳನಿಸ್ವಾಮಿ  ಅವರೊಂದಿಗೆ ಕೈ ಜೋಡಿಸುವರೇ ಅಥವಾ ಪಕ್ಷದ ವಿಪ್ ಉಲ್ಲಂಘನೆ ಮಾಡಿ ಪಕ್ಷದಿಂದಲೇ ಉಚ್ಛಾಟನೆಗೊಂಡು  ಹೊಸ ಪಕ್ಷ ಸ್ಥಾಪನೆಯತ್ತ ಚಿಂತನೆ ನಡೆಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

SCROLL FOR NEXT