ನವದೆಹಲಿ: ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಇದುವರೆಗೆ ಪ್ರಚಾರಕ್ಕೆ ಬಾರದ ಪ್ರಿಯಾಂಕಾ ಗಾಂಧಿ ವಿರುದ್ಧ ನಿನ್ನೆ ಟೀಕಿಸಿದ್ದ ಸ್ಮೃತಿ ಇರಾನಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಯಾವ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಬೇಕೆಂಬುದು ಕಾಂಗ್ರೆಸ್ ಗೆ ತಿಳಿದಿದೆ, ಇದು ಇರಾನಿಯವರಿಗೆ ಸಂಬಂಧಪಟ್ಟ ವಿಷಯವಲ್ಲ ಎಂದು ಹೇಳಿದೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಪಿ.ಸಿ.ಚಕೊ, ಇರಾನಿಯವರ ಶೈಕ್ಷಣಿಕ ಅರ್ಹತೆ ಕುರಿತು ಕೆದಕಿದರು. ಪ್ರಶ್ನೆಗಳಿಗೆ ಉತ್ತರಿಸದಿರುವುದು ಒಂದು ವಿಷಯವಾದರೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಉತ್ತರಿಸಬೇಕಾದ ಹಲವು ಪ್ರಶ್ನೆಗಳಿವೆ ಎಂದರು.
ಇರಾನಿಯವರು ಮಾನವ ಸಂಪನ್ಮೂಲ ಸಚಿವೆಯಾಗಿದ್ದಾಗ ಅವರು ಹೋದಲ್ಲೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರ ಶೈಕ್ಷಣಿಕ ಅರ್ಹತೆ ಕುರಿತ ಕೇಸು ಕೋರ್ಟ್ ನಲ್ಲಿದೆ. ತಮ್ಮ ಶಿಕ್ಷಣದ ಅರ್ಹತೆ ವಿವರಗಳನ್ನು ಮಾಹಿತಿ ಹಕ್ಕು ಆಯೋಗಕ್ಕೆ ನೀಡಬಾರದೆಂದು ಸ್ವತಃ ಸ್ಮೃತಿ ಇರಾನಿಯವರೇ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದರು. ಅವರು ಅದರ ಬಗ್ಗೆ ಉತ್ತರಿಸಲು ಇಚ್ಛಿಸದಿದ್ದಲ್ಲಿ ರಾಜಕೀಯದಲ್ಲಿ ಇರಲೇಬಾರದು. ಪ್ರಿಯಾಂಕಾ ಗಾಂಧಿಯವರು ಎಲ್ಲಿ ಪ್ರಚಾರ ಮಾಡಬೇಕೆಂಬುದು ಅವರಿಗೆ ಸಂಬಂಧಪಟ್ಟ ವಿಷಯವೇ ಅಲ್ಲ ಎಂದರು.
ನಿನ್ನೆ ಪ್ರಿಯಾಂಕಾ ಗಾಂಧಿ ವಿರುದ್ಧ ಟೀಕಿಸಿದ್ದ ಸ್ಮೃತಿ ಇರಾನಿ, ಅಮೇಥಿ ಜನರು ಪ್ರಶ್ನೆ ಕೇಳಬಹುದು ಎಂಬ ಭಯದಿಂದ ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದಿದ್ದರು.
ಇನ್ನೊಂದೆಡೆ ಸ್ಮೃತಿ ಇರಾನಿಯವರ ಟೀಕೆಗೆ ಬೆಂಬಲ ವ್ಯಕ್ತಪಡಿಸಿರುವ ಮತ್ತೊಬ್ಬ ಬಿಜೆಪಿ ನಾಯಕಿ, ಸಂಸದರು ತಮ್ಮ ಸ್ವಕ್ಷೇತ್ರದಲ್ಲಿ ಇರದಿದ್ದರೆ ವಿರೋಧ ಪಕ್ಷದವರಿಗೆ ಅವರನ್ನು ಅಥವಾ ಅವರ ಹತ್ತಿರದ ಬಂಧುಗಳನ್ನು ಪ್ರಶ್ನಿಸುವ ಹಕ್ಕು ಇದೆ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಇಂದು ತಮ್ಮ ಸೋದರ ರಾಹುಲ್ ಗಾಂಧಿಯವರೊಂದಿಗೆ ರಾಯ್ ಬರೇಲಿಯಲ್ಲಿ ಮೊದಲ ಬಾರಿಗೆ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics