ರಾಹುಲ್ ಗಾಂಧಿ-ಅಖಿಲೇಶ್ ಯಾದವ್
ನವದೆಹಲಿ: ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿಯನ್ನು ಅಪವಿತ್ರ ಎಂದು ಬಣ್ಣಿಸಿರುವ ಬಿಜೆಪಿ, ಉತ್ತರ ಪ್ರದೇಶದ ಬೆಳವಣಿಗೆಗೆ ಈ ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿಲ್ಲ, ಬದಲಿಗೆ ನಾಶವಾಗಲು ಹೊರಟಿರುವ ಎರಡು ಪಕ್ಷಗಳನ್ನು ಉಳಿಸಿಕೊಳ್ಳಲು ಮಾಡಿಕೊಂಡ ಒಪ್ಪಂದ ಇದಾಗಿದೆ ಎಂದು ಟೀಕಿಸಿದೆ.
ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಮತ್ತು ಸಾಯಲು ಹೊರಟಿರುವ ಪಕ್ಷಗಳನ್ನು ಬದುಕಿಸಿಕೊಳ್ಳಲು ಅನಿವಾರ್ಯತೆಯಿಂದ ಮೈತ್ರಿ ಮಾಡಿಕೊಂಡಿವೆ. ಮುಲಾಯಂ ಸಿಂಗ್ ಯಾದವ್ ಅವರ ರಾಜವಂಶ ಕೊನೆಯ ಹಂತಕ್ಕೆ ಬಂದು ತಲುಪಿದೆ. ಯಾಕೆಂದರೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಗೆಲ್ಲಲು ಸಾಧ್ಯವಿಲ್ಲ, ಇನ್ನು ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿಯವರನ್ನು ಪ್ರತಿಯೊಂದು ಕಡೆ ಜನರು ತಿರಸ್ಕರಿಸುತ್ತಿದ್ದಾರೆ. ಹೀಗಾಗಿ ಅವನತಿಯತ್ತ ಸಾಗುತ್ತಿರುವ ಎರಡು ಪಕ್ಷಗಳು ಒಟ್ಟಿಗೆ ಸೇರಿದ್ದು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ರಾಜ್ಯದ ಅಭಿವೃದ್ಧಿ ಹೆಸರಿನಲ್ಲಿ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸುದೇಶ್ ವರ್ಮಾ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದರು.
ಈ ಮಧ್ಯೆ ಉತ್ತರ ಪ್ರದೇಶ ಚುನಾವಣೆ ಮುಗಿದ ನಂತರವೂ ಎಸ್ಪಿ-ಕಾಂಗ್ರೆಸ್ ನಡುವಣ ಮೈತ್ರಿ ಮುಂದುವರಿಯಬಹುದು ಎಂದು ಸೂಚನೆ ನೀಡಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಸಮಾನ ಮನಸ್ಕ, ಜಾತ್ಯತೀತ ಪಕ್ಷಗಳ ಬಲವರ್ಧನೆಗೆ ಮೈತ್ರಿಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಿಸಲಾಗುವುದು ಎಂದರು.
2019ರ ಲೋಕಸಭಾ ಚುನಾವಣೆಯಲ್ಲಿ ಎಸ್ಪಿ-ಕಾಂಗ್ರೆಸ್ ಮೈತ್ರಿ ಮುಂದುವರಿಯಲಿದೆ. ಉತ್ತರ ಪ್ರದೇಶದಲ್ಲಿ ಜಾತ್ಯತೀತತೆಯನ್ನು ಬಲಪಡಿಸಲು ನಾವು ಒಟ್ಟಾಗಿರಬೇಕೆಂದು ನಮಗೆ ಮನವರಿಕೆಯಾಗಿದೆ ಎಂದರು.