ನವದೆಹಲಿ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಹಾಗೂ ಚೇತನ್ ಚೌಹ್ವಾಣ್ ಅವರು ದಾಖಲಿಸಿರುವ ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 21ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಕೋರ್ಟ್ ಶನಿವಾರ ಸೂಚಿಸಿದೆ.
ತಾವು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಫೆ.22ರಂದು ದೆಹಲಿಗೆ ವಾಪಸ್ ಆಗುತ್ತಿರುವುದರಿಂದ ಖುದ್ದು ಹಾಜರಾತಿಯಿಂದ ವಿನಾಯ್ತಿ ಕೋರಿ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಿದ ಮೆಟ್ರೊಪೊಲಿಟ್ ಮ್ಯಾಜಿಸ್ಟ್ರೇಟ್ ಅಭಿಲಾಶ್ ಮಲ್ಹೊತ್ರಾ ಅವರು, ಮಾರ್ಚ್ 21ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಇದೇ ವೇಳೆ ಕೇಜ್ರಿವಾಲ್ ಜೊತೆ ಮಾನಹಾನಿ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಅಮಾನತುಗೊಂಡ ಬಿಜೆಪಿ ಸಂಸದ ಕಿರ್ತಿ ಆಜಾದ್ ಅವರಿಗೆ 10 ಸಾವಿರ ರುಪಾಯಿ ವೈಯಕ್ತಿಕ ಬಾಂಡ್ ಮೇಲೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.